ಪರ್ವತ ಪ್ರಸಂಗ

6/43

ನೀವು ಭೂಮಿಗೆ ಉಪ್ಪಾಗಿದ್ದೀರಿ

ಉಪ್ಪು, ವಸ್ತುಗಳನ್ನು ಕೆಡದಂತೆ ಇಡುವ ಗುಣಲಕ್ಷಣಕ್ಕಾಗಿ ಅಮೂಲ್ಯವಾದುದೆಂದು ಪರಿಗಣಿಸಲ್ಪಟ್ಟಿದೆ; ದೇವರು ತನ್ನ ಮಕ್ಕಳನ್ನು ಉಪ್ಪೆಂದು ಕರೆಯುವಾಗ, ಅವರನ್ನು ತನ್ನ ಕೃಪಾಧೀನರನ್ನಾಗಿ ಮಾಡುವ ಉದ್ದೇಶವು ಇತರರನ್ನು ರಕ್ಷಿಸುವುದಕ್ಕಾಗಿಯೇ ಎಂಬುದನ್ನು ಅವರಿಗೆ ತಿಳಿಯಪಡಿಸುವವನಾಗಿದ್ದಾನೆ. ಲೋಕದವರೆಲ್ಲಾ ದೇವರು ಒಂದು ಜನಾಂಗವನ್ನು ಆರಿಸಿಕೊಂಡುದರ ಉದ್ದೇಶವೇನಂದರೆ, ಅವರನ್ನು ತನ್ನ ಕುಮಾರ ಕುಮಾರ್ತಿಯರನ್ನಾಗಿ ದತ್ತು ಸ್ವೀಕಾರ ಮಾಡುವುದು ಮಾತ್ರವಲ್ಲ, ಆದರೆ ಇವರ ಮೂಲಕವಾಗಿ ಲೋಕವು ರಕ್ಷಣೆಗೆ ಹೇತುವಾದ ಕೃಪೆಯನ್ನು ಹೊಂದಲೆಂದೇ ಆರಿಸಿದನು. (ತೀತ 2:11) ಕರ್ತನು ಅಬ್ರಹಾಮನನ್ನು ಆರಿಸಿಕೊಂಡಾಗ, ಸುಮ್ಮನೇ ದೇವರ ವಿಶೇಷ ಮಿತ್ರನಾಗಿರಲೋಸುಗವಲ್ಲ, ಆದರೆ ದೇವರು ಜನಾಂಗಗಳಿಗೆ ದಯಪಾಲಿಸಲಿಚ್ಛಿಸಿದ ವಿಶೇಷವಾದ ಸುಯೋಗಗಳ ಮಧ್ಯಸ್ಥನಾಗಿರಲೆಂದೇ. ಯೇಸುವು ಕ್ರೂಜೆಗೇರಿಸಲ್ಪಡಲು ಮುಂಚೆ ತನ್ನ ಶಿಷ್ಯರೊಡನೆ ಮಾಡಿದ ಕೊನೇ ಪ್ರಾರ್ಥನೆಯಲ್ಲಿ ಆತನು ಹೇಳಿದ್ದು: “ಇವರು (ಸತ್ಯದ ಮೂಲಕವಾಗಿ) ಪ್ರತಿಷ್ಠಿತರಾಗಬೇಕೆಂದು ಇವರಿಗೋಸ್ಕರ ನಾನು ನನ್ನನ್ನು ಪ್ರತಿಷ್ಠೆ ಪಡಿಸಿಕೊಳ್ಳುತ್ತೇನೆ.” ಯೋಹಾನ 17:19. ಇದೇ ರೀತಿಯಲ್ಲಿ ಸತ್ಯದ ಮೂಲಕ ಶುದ್ಧರಾದ ಕ್ರೈಸ್ತರು ಲೋಕವನ್ನು ಕೇವಲ ಧರ್ಮ ಭ್ರಷ್ಟತೆಯಿಂದ ಕಾಯುವ ಗುಣಲಕ್ಷಣಗಳನ್ನುಳ್ಳವರಾಗಿರುತ್ತಾರೆ. MBK 41.1

ಉಪ್ಪು ಯಾವ ವಸ್ತುವಿನೊಡನೆ ಸೇರಿಸಲ್ಪಡುತ್ತದೋ ಅದರೊಡನೆ ಮಿಲಿತಗೊಳ್ಳಬೇಕು; ಕೆಡದಂತೆ ಇಡಬೇಕಾದರೆ ಇದು ಆ ವಸ್ತುವನ್ನು ಭೇದಿಸಿಕೊಂಡು ಒಳಹೊಕ್ಕು ನೆನೆಯಬೇಕು. ಇದರಂತೆಯೇ ಮನುಷ್ಯರು ಸುವಾರ್ತೆಯ ರಕ್ಷಣಾ ಸಾಮರ್ಥ್ಯದಿಂದ ಹಿಡಿಯಲ್ಪಡಬೇಕಾದರೆ ವೈಯುಕ್ತಿಕ ಸಂಪರ್ಕವೂ ಮತ್ತು ಸಹವಾಸವೂ ಅವಶ್ಯವಾಗಿದೆ. ಸಮೂಹಗಳಾಗಿ ರಕ್ಷಿಸಲ್ಪಡುವುದಿಲ್ಲ, ಆದರೆ ಒಬ್ಬೊಬ್ಬರಾಗಿಯೇ. ವೈಯಕ್ತಿಕ ಪರಿಣಾಮವು ಒಂದು ಶಕ್ತಿಯಾಗಿದೆ. ನಾವು ಯಾರಿಗೆ ಹಿತವನ್ನು ಬಯಸುತ್ತೇವೋ ಅವರ ಸಾಮೀಪ್ಯವನ್ನೈದಬೇಕು. MBK 41.2

ಉಪ್ಪಿನ ಸವಿಯು ಕ್ರೈಸ್ತನ ಜೀವಂತ ಶಕ್ತಿಯನ್ನು ನಿರೋಪಿಸುತ್ತದೆ—ಯಾವುವೆಂದರೆ ಹೃದಯಾಂತರಾಳದಲ್ಲಿರುವ ಕ್ರಿಸ್ತನ ಪ್ರೀತಿ, ಮತ್ತು ಜೀವವನ್ನು ಆಕ್ರ ಮಿಸುವ ಕ್ರಿಸ್ತನ ನೀತಿ, ಕ್ರಿಸ್ತನ ಪ್ರೀತಿಯು ಆಕ್ರಮಣ ಮತ್ತು ಪ್ರಸಾರಣ ಗುಣವುಳ್ಳದ್ದು, ಇದು ನಮ್ಮಲ್ಲಿ ನಿವಾಸಿಸಿದ್ದರೆ, ಇತರರಿಗೆ ಧಾರಾಳವಾಗಿ ಪ್ರವಹಿಸುತ್ತದೆ. ಅವರ ಹೃದಯಗಳು ನಮ್ಮ ಅಸ್ವಾರ್ಥಪರ ಆಸಕ್ತಿ ಮತ್ತು ಪ್ರೀತಿಗಳಿಂದ ಉದ್ರಿಕ್ತವಾಗುವ ಪರ್ಯಂತರವೂ ಅವರ ಸಾಮೀಪ್ಯವನ್ನೈದಬೇಕು. ಯಥಾರ್ಥ ನಂಬಿಕೆಯುಳ್ಳವರುಆಕ್ರಮಣ ಗುಣವುಳ್ಳ ಜೀವಂತ ಪ್ರಭಾವವನ್ನು ಪ್ರಸರಿಸಿ ತಾವು ಯಾರಿಗಾಗಿ ದುಡಿಯುತ್ತಿದ್ದಾರೋ ಆ ಆತ್ಮಗಳಿಗೆ ನೂತನ ಧರ್ಮಪ್ರಭಾವವನ್ನು ಕೊಡುವರು. ಮಾನವನ ಶಕ್ತಿಯಿಂದ ಮಾತ್ರವೇ ಆಗುವುದಿಲ್ಲ, ಆದರೆ ಪರಿಶುದ್ಧಾತ್ಮನ ಶಕ್ತಿಯಿಂದಲೇ ಪರಿವರ್ತನ ಕಾರ್ಯವು ಸಾಗುವುದು. MBK 41.3

ಯೇಸುವು ಈ ಗಂಭೀರವಾದ ಎಚ್ಚರಿಕೆಯನ್ನು ಕೊಟ್ಟಿದ್ದಾನೆ: “ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ಉಪ್ಪಿನ ರಿಚಿ ಬಂದೀತು? ಜನರು ಅದನ್ನು ಹೊರಗೆ ಹಾಕಿ ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತಾವ ಕೆಲಸಕ್ಕೂ ಬಾರದು.” MBK 42.1

ಕ್ರಿಸ್ತನ ವಕ್ಯಗಳನ್ನು ಅವರು ಕೇಳುತ್ತಲೇ, ಅವರು ತಮ್ಮ ಮನೋದೃಷ್ಟಿಯಿಂದ, ತನ್ನ ರುಚಿಯನ್ನು ಕಳೆದುಕೊಂಡದ್ದರಿಂದ ಅಪ್ರಯೋಜಕವಾಗಲು ಮಾರ್ಗದಲ್ಲಿ ಹಾಕಲ್ಪಟ್ಟಿರುವ ಹೊಳೆಯುತ್ತಿರುವ ಬಿಳಿ ಉಪ್ಪನ್ನು ಕಾಣಲಾರದು. ಇದು ಪರಿಸಾಯರ ಸ್ಥಿತಿಯನ್ನೂ, ಮತ್ತು ಸಮಾಜದಲ್ಲಿ ಅವರ ಮತದಿಂದುಂಟಾದ ಪರಿಣಾಮವನ್ನು ವಿಷದವಾಗಿ ನಿರೂಪಿಸುತ್ತಿತ್ತು. ಮಾತ್ರವಲ್ಲದೆ, ವಿಶ್ವಾಸಹೀನರಾಗಿ ಕ್ರಿಸ್ತನನ್ನಂಗೀಕರಿಸದೆ ಯಾರ ಆತ್ಮಗಳಿಂದ ದೇವರ ಕೃಪೆಯ ಶಕ್ತಿಯು ತೊಲಗಿದೆಯೋ ಅವರ ಜೀವ್ಯವನ್ನೂ ಸೋಚಿಸುವುದಾಗಿದೆ. ಅವನು ಎಂಥಾ ಉದ್ಯೋಗದಲ್ಲಿದ್ದರೂ ಕೂಡ, ಅಂಥವನು ಮಾನವರಿಂದಲೂ ಮತ್ತು ದೇವದೂತರಿಂದಲೂ ನಿಸ್ಸಾರವಾದವನೆಂದೂ ಅಹಿತನೆಂದೂ ಪರಿಗಣಿಸಲ್ಪಡುವನು. ಇಂಥವನಿಗೆ ಯೇಸು ಹೇಳಿದ್ದು: “ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು, ನೀನು ಬೆಚ್ಚಗೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರು ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು.” ಪ್ರಕಟನೆ 3:15, 16. MBK 42.2

ಕ್ರಿಸ್ತನಲ್ಲಿ ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆಯನ್ನಿಡದೆ ಸಂದೇಹ ಸ್ವಭಾವವುಳ್ಳ ಈ ಲೋಕದಲ್ಲಿ ನಮ್ಮ ಸ್ವಭಾವವನ್ನು ತೋರ್ಪಡಿಸಲಾಗುವುದಿಲ್ಲ. ನಾವು ಹೊಂದದಿರುವುದನ್ನು ಇತರರಿಗೆ ಕೊಡಲು ಸಾಧ್ಯವಿಲ್ಲ. ನಾವು ಎಷ್ಟರಮಟ್ಟಿಗೆ ಕ್ರಿಸ್ತನ ಭಕ್ತಿಯಲ್ಲಿಯೂ ಮತ್ತು ಪವಿತ್ರತೆಯಲ್ಲಿಯೂ ಇದ್ದೇವೋ ಅದೇ ಪ್ರಮಾಣದಲ್ಲಿ ಮಾನವನ ಉದ್ದಾರಗಳಿಗೆ ಪರಿಣಾಮಕಾರಿಗಳಾಗುತ್ತೇವೆ. ಯಥಾರ್ಥವಾದ ಸೇವೆಯೂ, ಯಥಾರ್ಥವಾದ ಪ್ರೀತಿಯೂ ಅನುಭವವೂ ಇಲ್ಲದಿದ್ದರೆ ಸಹಾಯಮಾಡಲು ಆ ಶಕ್ತಿಯಿರುವುದಿಲ್ಲ, ಪರಲೋಕ ಸಂಪರ್ಕವಿರುವುದಿಲ್ಲ, ಜೀವ್ಯದಲ್ಲಿ ಕ್ರಿಸ್ತನ ರುಚಿಯೂ ಇರುವುದಿಲ್ಲ. ಪರಿಶುದ್ಧಾತ್ಮನು ನಮ್ಮನ್ನು ಕ್ರಿಸ್ತನಲ್ಲಿರುವ ಸತ್ಯಗಳನ್ನು ಲೋಕಕ್ಕೆ ಆರುಹುವ ನಿಯೋಗಿಗಳಾಗಿ ಉಪಯೋಗಿಸಲು ಸಾಧ್ಯವಿಲ್ಲದಿದ್ದರೆ, ನಾವು ತನ್ನ ರುಚಿಯನ್ನು ಕಳೆದುಕೊಂಡು ಕೇವಲ ಅಪ್ರಯೋಜಕವಾದ ಉಪ್ಪಿನಂತಿರುವೆವು. ನಮ್ಮಲ್ಲುಂಟಾಗಿರುವ ಕ್ರಿಸ್ತನ ಅನುಗ್ರಹದ ಕೊರತೆಯಿಂದ, ನಾವು ನಂಬುತ್ತೇವೆಂದು ಪರಿಗಣಿಸಲ್ಪಟ್ಟ ಸತ್ಯದಲ್ಲಿ ಪವಿತ್ರೀಕರಿಸುವ ಶಕ್ತಿಯಿಲ್ಲವೆಂದು ಲೋಕದವರಿಗೆ ತೋರ್ಪಡಿಸುತ್ತೇವೆ; ಹೀಗೆ, ನಮ್ಮ ಪರಿಣಾಮವು ಹೋಗುವಲ್ಲೆಲ್ಲಾ ದೇವರ ವಾಕ್ಯದಿಂದ ಯಾವ ಫಲವನ್ನೂ ವ್ಯಕ್ತಪಡಿಸಲಾರೆವು. “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದ ಕೊಡುವ ಕಂಚೂ, ಗಣಗಣಿಸುವ ತಾಳವೂ ಆಗಿದ್ದೇನೆ. ನನಗೆ ಪ್ರವಾದನ ವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವುದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ. ನನಗಿರುವುದನ್ನೆಲ್ಲಾ ಅನ್ನದಾನ ಮಾಡಿದರೂ ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವುದಿಲ್ಲ.” ಕೊರಿಂಥ 13:1-3. MBK 42.3

ಹೃದಯವು ಪ್ರೀತಿ ಭರಿತವಾದಾಗ, ಇತರರಿಗೆ ಧಾರಾಳವಾಗಿ ಪ್ರವಹಿಸುತ್ತದೆ, ಅವರಿಂದ ಹೊಂದಿದ ಉಪಕಾರಗಳಿಂದಲ್ಲ, ಆದರೆ ಪ್ರೀತಿಯು ಕ್ರಿಯೆಯ ಮೂಲ ತತ್ವವಾಗಿರುವುದರಿಂದಲೇ. ಪ್ರೀತಿಯು ಗುಣಗಳನ್ನು ಮಾರ್ಪಡಿಸುತ್ತದೆ, ಮನಸ್ಸಿನ ಆವೇಗವನ್ನು ಹತೋಟಿಯಲ್ಲಿಡುತ್ತದೆ, ದ್ವೇಷವನ್ನು ನಿಗ್ರಹಿಸುತ್ತದೆ, ಮತ್ತು ವಾತ್ಸಲ್ಯವನ್ನು ಘನಪಡಿಸುತ್ತದೆ. ಈ ಪ್ರೀತಿಯು ವಿಶ್ವದಷ್ಟು ವಿಶಾಲವಾಗಿದೆ, ಮತ್ತು ದೇವದೂತರ ಸೇವೆಗನುಗುಣವಾಗಿದೆ. ಹೃದಯಾಂತರಾಳದಲ್ಲಿ ಇದನ್ನು ಪೋಷಿಸಿದರೆ, ಜೀವಾದ್ಯಂತವನ್ನೂ ಮಧುರಗೊಳಿಸಿ, ತನ್ನ ಆಶೀರ್ವಾದವನ್ನು ಸುತ್ತುಮುತ್ತಲೂ ಪ್ರಸರಿಸುವುದು. ಇದೇ, ಇದು ಮಾತ್ರವೇ ನಮ್ಮನ್ನು ಭೂಮಿಗೆ ಉಪ್ಪಾಗಿ ಮಾಡುವುದು. MBK 43.1