ಪರ್ವತ ಪ್ರಸಂಗ
ಪರ್ವತ ಪ್ರಸಂಗ
ಪರ್ವತ ಪಾರ್ಶ್ವದಲ್ಲಿ
aaಯೇಸುಕ್ರಿಸ್ತನು ಬೆತ್ಲೆಹೇಮಿನಲ್ಲಿ ಹುಟ್ಟಲಿಕ್ಕೆ ಹದಿನಾಲ್ಕು ಶತಮಾನಗಳಿಗೆ ಹಿಂದೆ, ಇಸ್ರಾಯೇಲ ಜನರ ರಮಣೀಯವಾದ ಶೆಕೆಮ್ ಕಣಿವೆಯಲ್ಲಿ ಕೂಡಿಬಂದು, ಇಬ್ಬದಿಗಳಲ್ಲಿರುವ ಪರ್ವತಗಳಿಂದ ಆಶೀರ್ವಾದ ಮತ್ತು ಶಾಪಗಳನ್ನು ಘೋಷಿಸುವ ಯಾಜಕರ ಧ್ವನಿಯನ್ನು ಕೇಳುವರು.— “ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ ಆಶೀರ್ವಾದವೂ ಈ ಆಜ್ಞೆಗಳಿಗೆ ವಿಧೇಯರಾಗದೆ ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ... ಅನ್ಯ ದೇವರುಗಳನ್ನು ಅವಲಂಬಿಸಿದರೆ ಶಾಪವೂ ನಿಮಗುಂಟಾಗುವವು.” ಧರ್ಮೋಪದೇಶಕಾಂಡ 11:27, 28. ಹೇಗೆ ಸ್ವಸ್ತಿ ವಚನಗಳು ನುಡಿಯಲ್ಪಟ್ಟ ಆ ಪರ್ವತವು “ಸ್ವಸ್ತಿ ವಾಚನ ಪರ್ವತ“ ಅಂದರೆ “ಆಶೀರ್ವಾದ ಪರ್ವತ” ವೆಂದು ಪ್ರಸಿದ್ಧವಾಯಿತು. ಆದರೆ ಅಧರ್ಮಪ್ರವರ್ತಕವೂ ಸಂತಾಪಪೂರಿತವೂ ಆದ ಈ ಲೋಕಕ್ಕೆ ಸ್ವಸ್ತಿವಚನವಾಗಿತ್ತ ವಾಕ್ಯಗಳು ಗೆರಿಜ್ಜೀಮ್ ಪರ್ವತದಿಂದ ಬಾರಲಿಲ್ಲ. ಇಸ್ರಾಯೇಲರು ತಮ್ಮ ಮುಂದೆ ಇರಿಸಲ್ಪಟ್ಟಿದ್ದ ಉಜ್ವಲಧ್ಯೇಯಕ್ಕೆ ಭಂಗ ತಂದರು ಯೆಹೋಶುವನಂಥವನೊಬ್ಬನು ಆತನ ಜನರನ್ನು ಸದ್ವಿಶ್ವಾಸದ ವಿಶ್ರಾಂತಿಗೆ ನಡೆಸುವ ಮಾರ್ಗದರ್ಷಿಯಾಗಬೇಕು. ಗೆರಿಜ್ಜೀಮ್ ಪರ್ವತವು ಇನ್ನೆಂದಿಗೂ ಧನ್ಯವಾದಗಳ ಪರ್ವತವೆನಿಸದು, ಆದರೆ ಯೇಸುಕ್ರಿಸ್ತನು ತನ್ನ ಶಿಷ್ಯರಿಗೂ ಮತ್ತು ಆತನ ಉಪದೇಶವನ್ನು ಕೇಳಲು ನೆರೆದುಬಂದ ಜನಸ್ತೋಮಕ್ಕೂ ಧನ್ಯವಾಚನಗಳನ್ನು ನುಡಿದ, ಗೆನೆಸೆರೆತ್ ಸರೋವರದ ಪಕ್ಕದಲ್ಲಿರುವ ಅನಾಮಿಕ ಪರ್ವತವೇ ಧನ್ಯವಾದಗಳ ಪರ್ವತವೆಂದೆನಿಸುವುದು. MBK 5.1
ಈ ಘಟನೆಗಳು ಸಂಭವಿಸಿದ ಕ್ಷೇತ್ರಕ್ಕೆ ಭಾವನೆಯಲ್ಲಿ ಪ್ರಯಾಣಿಸಿ ಆ ಪರ್ವತದ ಪಾರ್ಶ್ವದಲ್ಲಿ ಕ್ರಿಸ್ತನ ಶಿಷ್ಯರೊಡನೆ ಕುಳಿತು ಅವರ ಅಂತರಿಂದ್ರಿಯಗಳನ್ನು ಹೊಕ್ಕು ಅವರ ಚಿತ್ತವೃತ್ತಿಯನ್ನೂ ಆಲೋಚನೆಗಳನ್ನೂ ಪ್ರವೇಶಿಸುತ್ತೇವೆಂದು ಊಹಿಸುವ. ಕ್ರಿಸ್ತನ ವಾಕ್ಯಗಳು ಅವನ್ನು ಕೇಳಿದವರಲ್ಲಿ ಎಂಥಾ ಅರ್ಥವನ್ನು ಕಲ್ಪಿಸಿದುವೆಂಬುದನ್ನು ಅರಿತುಕೊಂಡು, ನಾವು ಅವುಗಳಲ್ಲಿ ಮನೋಜ್ಞತೆಯನ್ನೂ ಸುವ್ಯಕ್ತತೆಯನ್ನೂ ಗ್ರಹಿಸುತ್ತೇವೆ, ಮಾತ್ರವಲ್ಲದೆ ನಮಗಾಗಿಯೂ ಅವುಗಳ ಉಜ್ವಲ ಪಾಠಗಳನ್ನೂ ಸಂಗ್ರಹಿಸುತ್ತೇವೆ. MBK 5.2
ರಕ್ಷಕನು ತನ್ನ ಸೇವೆಯನ್ನು ಆರಂಭಿಸಿದಾಗ, ಮೆಸ್ಸೀಯನ ಮತ್ತು ಆತನ ಸೇವೆಯ ವಿಷಯವಾದ ಜನಸಾಮಾನ್ಯವಾದ ಕಲ್ಪನೆಯು ಅಥವಾ ಊಹೆಯು ಸಮ್ಮತವಲ್ಲದ್ದಾಗಿ ಆತನನ್ನು ಅಂಗೀಕರಿಸಿಕೊಳ್ಳಲು ಜನರನ್ನು ಸಂಪೂರ್ಣ ಅನುಚಿತರನ್ನಾಗಿ ಮಾಡಿತು. ಯಥಾರ್ಥವಾದ ಧರ್ಮನಿಷ್ಠೆಯು ಸಾಂಪ್ರದಾಯಿಕ ಮತ್ತು ಬಾಹ್ಯಕರ್ಮಾಚರಣೆಗಳಲ್ಲಿ ಮಾಯವಾಗಿ ಪ್ರವಾದನೆಗಳು ದುರಹಂಕಾರ ಮತ್ತು ಐಹಿಕಭೋಗ ಲೋಲುಪ್ತರಾದವರ ಅಧಿಕಾರವಾಣಿಯ ಸಮುಖದಲ್ಲಿ ವ್ಯಾಖ್ಯಾನಿಸಲ್ಪಡುತ್ತಿದ್ದುವು. ಯೆಹೂದ್ಯರು ಬರಬೇಕಾದಾತನನ್ನು ಇದಿರುನೋಡುತ್ತಿದ್ದರು, ಪಾಪವಿಮೋಚಕನೆಂದಲ್ಲ, ಆದರೆ ಮಹಾರಾಜಾಧಿರಾಜನಾಗಿ ಎಲ್ಲಾ ಜನಾಂಗಗಳನ್ನೂ ಯೂದಕುಲದ ಸಿಂಹದ ಪರಮಾಧಿಕಾರಕ್ಕೆ ಅಧೀರರನ್ನಾಗಿ ಮಾಡಲುಳ್ಳ ಚಕ್ರವರ್ತಿ ಸಾರ್ವಭೌಮನನ್ನೂ, ಸ್ನಾನಿಕನಾದ ಯೋಹಾನನು ಪ್ರಾಚೀನಕಾಲದ ಪ್ರವಾದಿಗಳ ಹೃದಯ ಬೇಧಕ ಶಕ್ತಿಯಿಂದ “ಮಾನಸಾಂತರಪಟ್ಟು ತಿರುಗಿಕೊಳ್ಳಿರಿ” ಎಂದು ಘೋಷಿಸಿದ್ದೆಲ್ಲಾ ನಿರರ್ಥಕವಾಯಿತು. ಯೋರ್ದನ್ ನದಿಯ ದಡದಲ್ಲಿ, “ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವನು” ಎಂದು ಯೋಹಾನನು ತನ್ನ ಕಡೆ ಬರುತ್ತಿದ್ದ ಯೇಸುವನ್ನು ತೋರಿಸಿದ್ದು ವ್ಯರ್ಥವಾಯಿತು. ದೇವರು ಅವರ ಮನಸ್ಸುಗಳನ್ನು ರಕ್ಷಕನ ಶ್ರಮೆಯನ್ನು ಕುರಿತು ಬರೆದಿರುವ ಯೆಶಾಯನ ಪ್ರವಾದನೆಗೆ ನಿಯಂತ್ರಿಸಲು ಪ್ರಯತ್ನಿಸಿದನು; ಆದರೆ ಅವರು ಗಮನಿಸದಾದರು. MBK 6.1
ಇಸ್ರಾಯೇಲರ ಅಧ್ಯಾಪಕರೂ ಪ್ರಮುಖರೂ ಆತನ ಪರಿವರ್ತಕ ಕೃಪೆಗೆ ಶರಣಾಗತರಾಗಿದ್ದರೆ, ಯೇಸುಸ್ವಾಮಿಯು ಅವರನ್ನು ಜನಾಂಗಗಳ ಮಧ್ಯದಲ್ಲಿ ತನ್ನ ನಿಯೋಗಿಗಳನ್ನಾಗಿ ನಿಯಮಿಸುತ್ತಿದ್ದನು. ಯೂದಾಯದಲ್ಲಿ ಮೊದಲು ಆತನ ರಾಜ್ಯದ ಬರುವಿಕೆಯು ಮತ್ತು ಮಾನಸಾಂತರ ಪಡಲು ಆಮಂತ್ರಣವೂ ಘೋಷಿಸಲ್ಪಟ್ಟವು. ಯೆರುಸಲೇಮಿನ ದೇವಾಲಯದಿಂದ ಹೊಲೆಗೆಡುಕರನ್ನು ತರುಬುವುದರಿಂದ, ತಾನೇ ಬರಬೇಕಾದ ಮೆಸ್ಸೀಯನೆಂದು ಶ್ರುತಪಡಿಸಿದನು, — ಪಾಪ ಕಳಂಕದಿಂದ ಆತ್ಮಗಳನ್ನು ಶುದ್ಧಮಾಡುವಾತನೂ ಮತ್ತು ತನ್ನ ಜನರನ್ನು ಕರ್ತನಿಗೆ ಮೀಸಲಾದವರನ್ನಾಗಿ ಮಾಡತಕ್ಕವನೂ ತಾನೇ ಎಂದು ಪ್ರಕಟಿಸಿದನು. ಆದರೆ ಯೆಹೂದ್ಯ ಪ್ರಮುಖರು ನಜರೇತಿನ ವಿನೀತ ಉಪಾಧ್ಯಾಯನನ್ನು ಅಂಗೀ ಕರಿಸಿಕೊಳ್ಳುವುದಕ್ಕೆ ತಮ್ಮನ್ನು ತಗ್ಗಿಸಿಕೊಳ್ಳದಾದರು. ಆತನು ಎರಡನೆಯ ಸಾರಿ ಯೆರುಸಲೇಮಿಗೆ ಭೇಟಿಯಿತ್ತಾಗ, ದೋಷಾರೋಪಿತನಾಗಿ ಸನ್ಹೆದ್ರಿಮ್ ಸಂಘದ ಮೊಂದೆ ತರಲ್ಪಟ್ಟಾಗ, ಅಧಿಕಾರಿಗಳು ಆತನ ಪ್ರಾಣವನ್ನು ತೆಗೆಯುವ ಪ್ರಯತ್ನವನ್ನು ತಪ್ಪಿಸಿದ್ದು ಜನರ ವಿಷಯವಾದ ಭಯವೇ. ಅಂದೇ ಆತನು ಯೂದಾಯವನ್ನು ಬಿಟ್ಟು ಗಲಿಲಾಯದಲ್ಲಿ ತನ್ನ ಸೇವೆಯನ್ನು ಮಾಡಲು ಪ್ರವೇಶಿಸಿದನು. MBK 6.2
ಈ ಸ್ಥಳದಲ್ಲಿ ಪರ್ವತಪ್ರಸಂಗವು ಪ್ರಸಿದ್ಧವಾಗಲು ಕೆಲವು ತಿಂಗಳುಗಳಿಗೆ ಮುನ್ನವೇ ಆರಂಭವಾಗಿ ಮುಂದುವರಿದಿತ್ತು. ಆತನು ಸಾರಿದ ಸುವಾರ್ತೆಯು “ಪರಲೋಕ ರಾಜ್ಯವು ಸಮೀಪಿಸಿತು” (ಮತ್ತಾಯ 4:17) ಎಂಬುದು ಎಲ್ಲಾ ಪಂಗಡಗಳವರ ಲಕ್ಷ್ಯವನ್ನೂ ಸೆಳೆದು ಅವರ ಆಕಾಂಕ್ಷಾನಿರೀಕ್ಷೆಯ ಜ್ವಾಲೆಯನ್ನು ಉದ್ದೀಪಿಸಿತು. ಈ ನೂತನ ಧರ್ಮೋಪದೇಶಕನ ಕೀರ್ತಿಯು ಪಾಲೆಸ್ತೀನ ದೇಶದ ಎಲ್ಲೆಗಳನ್ನು ಮೀರಿ ಪ್ರಸಿದ್ಧವಾಗಿ, ಪುರೋಹಿತ ಪ್ರಭುತ್ವದ ಪ್ರತಿಭಟನೆಯನ್ನೆಲ್ಲಾ ನಿರಾಕರಿಸಿ, ಈತನೇ ನಿರೀಕ್ಷಿತ ರಕ್ಷಕನಾಗಿರಬಹುದೇ ಎಂಬ ಜನವಾಣಿಯು ಎಲ್ಲೆಲ್ಲೂ ಹರಡಿತು. ಮಹಾ ಸಮೂಹಗಳು ಕ್ರಿಸ್ತನ ಹೆಜ್ಜೆಯ ಜಾಡನ್ನು ಹಿಂಬಾಲಿಸಿ ಆತನ ಬಳಿಗೆ ಕಿಕ್ಕಿರಿದು ನೆರೆದರು; ಮಾತ್ರವಲ್ಲದೆ ಜನಸಾಮಾನ್ಯನಾದ ಅವರ ಆವೇಶವು ಕೆರಳಿತು. MBK 7.1
ಅತಿ ಸಾಮೀವ್ಯ ಒಡನಾಡಿಗಳಾಗಿದ್ದ ಶಿಷ್ಯರು ಕ್ರಿಸ್ತನ ಸೇವೆಯಲ್ಲಿ ಆತನೊಡನೆ ಅತಿ ಉತ್ಸುಕತೆಯಿಂದ ಏಕೀಭವಿಸುವ ಸಮಯವು ಬಂದಿತ್ತು. ಕುರುಬನಿಲ್ಲದ ಕುರಿಗಳಂತೆ ಈ ಮಹಾ ಸಮೂಹವನ್ನು ಚಿಂತಾರಹಿತರಾಗಿ ಬಿಡಲು ಸಾಧ್ಯವಿರಲಿಲ್ಲ. ಶಿಷ್ಯರಲ್ಲಿ ಕೆಲವರು ಆತನ ಸೇವೆಯ ಆರಂಭದಲ್ಲೇ ಆತನನ್ನು ಸೇರಿದ್ದರು, ಹೀಗೆ ಹೆಚ್ಚು ಕಡಿಮೆ ಎಲ್ಲಾ ಹನ್ನೆರಡು ಶಿಷ್ಯರೂ ಯೇಸುವಿನ ಕುಟುಂಬದ ಅಂಗಿಗಳಾಗಿದ್ದರು. ಹೀಗಿದ್ದರೂ ಸಹ ಶಾಸ್ತ್ರಿಗಳ ಬೋಧನೆಗಳಿಂದ ತಪ್ಪು ಭಾವನೆಯುಳ್ಳವರಾಗಿ ಇತರರಂತೆ ಇವರೂ ಲೌಕಿಕ ರಾಜ್ಯವನ್ನು ಎದುರು ನೋಡುವವರಾದರು. ಯೇಸುವಿನ ಚಲನವಲನಗಳನ್ನು ಅವರು ಗ್ರಹಿಸಲಾರದಾದರು. ಆತನು ತನ್ನ ಪಕ್ಷವನ್ನು ಯಾಜಕರ ಮತ್ತು ರಬ್ಬಿಗಳ ಸಹಾಯದಿಂದ ಬಲಪಡಿಸಲು ಪ್ರಯತ್ನಿಸದೆಯೂ ಮತ್ತು ಇಹಲೋಕ ರಾಜನಾಗಿ ತನ್ನ ಅಧಿಕಾರವನ್ನು ಸ್ಥಾಪಿಸದೆಯೂ ಇದ್ದುದನ್ನು ನೋಡಿದ ಶಿಷ್ಯರು ಕ್ಲೇಶದಿಂದ ಕಂಗೆಟ್ಟರು. ಕ್ರಿಸ್ತನು ದಿವಾರೋಹಣನಾದ ತರುವಾಯ ಅವರ ಮೇಲೆ ಬೀಳಲಿದ್ದ ಪವಿತ್ರ ವಿಶ್ಆಸವನ್ನು ಹೊರಲು ಸಿದ್ಧರಾಗುವ ಮುನ್ನ ಈ ಶಿಷ್ಯರಲ್ಲಿ ಮಹಾ ಮಾರ್ಪಾಡು ಉಂಟಾಗಬೇಕಾಗಿತ್ತು. ಹೀಗಿದ್ದರೂ ಕ್ರಿಸ್ತನ ಪ್ರೀತಿಯ ಆಮಂತ್ರಣಕ್ಕೆ ಪ್ರವರ್ತಿಸಿದ್ದರು, ಮತ್ತು ನಂಬಿಕೆಯಲ್ಲಿ ಮಂದಹೃದಯರಾಗಿದ್ದರೂ, ಕ್ರಿಸ್ತನು ತನ್ನ ಮಹಾಸೇವೆಗೆ ಸಿದ್ಧಪಡಿಸಲೂ ತರ್ಪೇತು ಕೊಡಲೂ ಇವರೇ ಯೋಗ್ಯರೆಂದು ಅರಿತನು. ಈಗ ಇವರು ದೈವೀಕವಾದ ಆತನ ಸೇವೆಯಲ್ಲಿ ಭರವಸವುಳ್ಳವರಾಗಲು ಸಾಕಷ್ಟು ಕಾಲವು ಆತನೊಡನೆ ಇದ್ದರು, ಮತ್ತು ಜನರೂ ಕೂಡ ಆತನ ಶಕ್ತಿಯ ವಿಷಯದಲ್ಲಿ ನಿಸ್ಸಂದೇಹವಾದ ನಿದರ್ಶನವನ್ನೂ ಹೊಂದಿದ್ದರು; ಆತನ ರಾಜ್ಯದ ನಿಜ ಪ್ರಕೃತಿಯನ್ನು ಅರಿಯಲು ಮತ್ತು ಅದರ ತತ್ವಗಳನ್ನು ಕಂಠೋಕ್ತವಾಗಿ ತಿಳಿಸಲು ಮಾರ್ಗವು ಸಿದ್ಧವಿತ್ತು. MBK 7.2
ಗಲಿಲಾಯ ಸಮುದ್ರದ ಬದಿಯಲ್ಲಿದ್ದ ಒಂದು ಮಲೆಯಮೇಲೆ ಚುನಾಯಿತರಾದ ಇವರಿಗಾಗಿ, ಕ್ರಿಸ್ತನು ಪ್ರಾರ್ಥಿಸುತ್ತಾ ರಾತ್ರಿಯನ್ನೆಲ್ಲಾ ಕಳೆದಿದ್ದನು. ಅರುಣೋದಯದಲ್ಲಿ ಅವರನ್ನು ತನ್ನೆಡೆಗೆ ಬರಮಾಡಿ, ಪ್ರಾರ್ಥನೆ ಮತ್ತು ತಿಳುವಳಿಕೆಯಿಂದ ಕೂಡಿದ ಮಾತುಗಳಿಂದ, ಅವರ ತಲೆಯ ಮೇಲೆ ತನ್ನ ಹಸ್ತಗಳನ್ನಿಟ್ಟು ಆಶೀರ್ವದಿಸಿ ಸುವಾರ್ತಾಸೇವೆಗೆ ಪ್ರತ್ಯೇಕಿಸಿದನು. ತರುವಾಯ ಸಮುದ್ರದ ಕಡೆಗೆ ಅವರೊಡನೆ ಧಾವಿಸಿ ಒಂದು ಸಮೂಹವು ಆಗಲೇ ಆತನ ಉಪದೇಶವನ್ನು ಕೇಳಲು ಕೂಡಿರುವುದನ್ನು ಕಂಡನು. MBK 8.1
ಗಲಿಲಾಯದ ಪಟ್ಟಣದವರಲ್ಲದೆ ಯೂದಾಯ ಮತ್ತು ಯೆರುಸಲೇಮು ಪಟ್ಟಣಗಳವರ ಸಮೂಹವೂ ಕೂಡಿತ್ತು; ಪೆರಿಯಾ ಮತ್ತು ಅರ್ಧ ಅಜ್ಞಾನಿಗಳಾಗಿದ್ದ ದೆಕಪೋಲಿಯದವರೂ, ಯೂದಾಯದಿಂದ ಬಹುದೂರ ಪ್ರದೇಶವಾದ ಇದೂಮಾಯ, ತೂರ್ ಸೀರ್ದೋ ಪಟ್ಟಣಗಳಿಂದಲೂ ಮತ್ತು ಮೆಡಿಟರೇನಿರ್ಯ ಸಮುದ್ರದ ಕರಾವಳಿಯ ಫೋನೀಶಿಯಾ ಪಟ್ಟಣಗಳಿಂದಲೂ ಬಂದಿದ್ದರು. “ಆತನು ಮಾಡಿದ ಮಹಾ ಕ್ರಿಯೆಗಳನ್ನು ಕೇಳಿ, ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಸಿಮಾಡಿಕೊಳ್ಳುವುದಕ್ಕೂ ಬಂದಿದ್ದರು, ಮತ್ತು ಆತನಿಂದ ಶಕ್ತಿಯು ಹೊರಟು ಎಲ್ಲರನ್ನೂ ವಾಸಿಮಾಡಿತು.” (ಮಾರ್ಕ 3:8; ಲೂಕ 6: 17-19.) MBK 8.2
ಸಮುದ್ರದಡದಲ್ಲಿ ಜನರು ನಿಂತು ಆತನ ಉಪದೇಶವನ್ನು ಕೇಳಲು ಸ್ಥಳವು ಬಹು ಇಕ್ಕಟ್ಟಾಗಿದ್ದುದರಿಂದ, ಯೇಸುವು ಮರಳಿ ಪರ್ವತಪಾರ್ಶ್ವಕ್ಕೆ ಧಾವಿಸಿದನು. ರಮ್ಯವಾದ ತಾವಿನಲ್ಲಿ ಎಲ್ಲರೂ ಕೂಡಬಹುದಾದ ಸ್ಥಳದಲ್ಲಿ ಯೇಸುವು ಹುಲ್ಲಿನ ಮೇಲೆ ಕುಳಿತನು, ಶಿಷ್ಯರೂ ಮತ್ತು ಜನಸಮುದಾಯವೂ ಆತನ ಮಾದರಿಯನ್ನೇ ಅನುಸರಿಸಿ ಎಲ್ಲರೂ ಹುಲ್ಲಿನ ಮೇಲೆ ಕುಳಿತರು. MBK 8.3
ಸಾಮಾನ್ಯವಾಗಿ ಎದುರುನೋಡುವುದಕ್ಕಿಂತಲೂ ಯಾವುದೋ ಒಂದು ಹೆಚ್ಚಿನ ಸಹಾನುಭೂತಿಯಿಂದ ಶಿಷ್ಯರು ತಮ್ಮ ಗುರುವಿನ ಬಳಿ ನೆರೆದು ಬಂದರು. ಬೆಳಗಿನಲ್ಲಿ ನಡೆದ ಕೆಲವು ಸಂಘಟನೆಗಳಿಂದ, ಅವರು ನಿರೀಕ್ಷಿಸಿದಂತೆ, ಆತನು ಸ್ಥಾಪಿಸಲಿದ್ದ ರಾಜ್ಯದ ವಿಷಯದಲ್ಲಿ ಏನೋ ಶ್ರುತಪಡಿಸುವನೆಂಬ ದೃಢಭರವಸೆಯಿಂದಿದ್ದರು, ಜನಸಮೂಹದಲ್ಲಿಯೂ ನಿರೀಕ್ಷೆಯು ವ್ಯಾಪಿಸಿ, ಅವರ ಉತ್ಸಾಹ ಪೂರಿತ ಮುಖಗಳಿಂದ ಆಶಕ್ತಿಯು ಹೊರಹೊಮ್ಮುತಿತ್ತು. MBK 9.1
ಪರ್ವತಪಾರ್ಶ್ವದಲ್ಲಿ ಹಸುರಾದ ಹುಲ್ಲಿನ ಮೇಲೆ ಕುಳಿತು ದೈವಗುರುವಿನ ಅಮೃತವಾಣಿಗಳನ್ನೀಕ್ಷಿಸತ್ತಿರಲು, ಭವಿಷ್ಯದ ಮಹಿಮೆಯ ವಿಷಯವಾದ ಯೋಚನೆಯು ಅವರ ಹೃದಯಗಳನ್ನು ಆಕ್ರಮಿಸಿತ್ತು. ಶಾಸ್ತ್ರಿಗಳೂ ಫರಿಸಾಯರೂ ಅಲ್ಲಿ ನೆರೆದಿದ್ದರು; ತಾವು ದ್ವೇಷಿಸಿದ ಪ್ರಪಂಚದ ಮಹಾ ಬಲಿಷ್ಠವಾದ ರೋಮ ಚಕ್ರಾಧಿಪತ್ಯವನ್ನು ತಮ್ಮಾಧೀನ ಮಾಡಿಕೊಂಡು ಅದರ ಅಪರಿಮಿತ ಐಶ್ವರ್ಯವನ್ನೂ ವೈಭವವನ್ನೂ ಎಂದು ಆಕ್ರಮಿಸುವೆವೋ ಎಂಬ ಯೋಚನಮಗ್ನರಾಗಿದ್ದರು. ಬ್ಡ ರೈತರೂ ಮತ್ತು ಬೆಸ್ತರೂ ಎಂದು ತಮ್ಮ ದರಿದ್ರ ಕುಟೀರಗಳೂ ಹೊಟ್ಟೆಗೆ ಸಾಲದ ಆಹಾರವೂ, ಶ್ರಮಜೀವನವೂ ಮತ್ತು ದಾರಿದ್ರ್ಯದ ಭಯವೂ ತೊಲಗಿ ಸೊಗಸಾದ ಭವನಗಳಲ್ಲಿ ವಾಸಿಸುವ ಸುಖದ ದಿನಗಳು ಬರುವುವೋ ಎಂಬುದನ್ನು ಆತನ ಬಾಯಿಯಿಂದ ಕೇಳಲು ತವಕದಿಂದ ಎದುರುನೋಡುತ್ತಿದ್ದರು. ತಾವು ಧರಿಸುತ್ತಿದ್ದ, ಹಗಲಿಗೆ ಉಡುಪಾಗಿಯೂ ರಾತ್ರಿಯಲ್ಲಿ ಹೊದಿಕೆಯಾಗಿಯೂ ಒದಗುತ್ತಿದ್ದ, ಒಂದೇ ಒಂದು ಮಲಿನ ವಸ್ತ್ರವು ತೊಲಗಿ, ಕ್ರಿಸ್ತನು ತಮ್ಮ ವಿಜಯಿಗಳ ಅಮೂಲ್ಯ ವಸ್ತ್ರಗಳನ್ನು ನಮಗೆ ಕೊಡುವನೆಂದು ನಿರೀಕ್ಷಿಸುತ್ತಿದ್ದರು. MBK 9.2
ಇಸ್ರಾಯೇಲು ದೇವರಾದುಕೊಂಡ ಜನಾಂಗವಾಗಿ ಬೇರೆ ಜನಾಂಗಗಳ ಮುಂದೆ ಘನತೆ ಹೊಂದಿ, ಯೆರೂಸಲೇಮು ಪ್ರಪಂಚದ ರಾಜ್ಯಗಳಿಗೆಲ್ಲಾ ಶಿರೋಭೂಷಣವಾಗುವುದೆಂಬ ದುರಭಿಮಾನ ನಿರೀಕ್ಷೆಯಿಂದ ಅವರೆಲ್ಲರ ಹೃದಯಗಳು ಪುಳಕಿತವಾಗಿದ್ದುವು. MBK 9.3