ಪರ್ವತ ಪ್ರಸಂಗ

2/43

ಧನ್ಯವಾಕ್ಯಗಳು

“ಆತನು ಅವರಿಗೆ ಉಪದೇಶಮಾಡಿ ಹೇಳಿದ್ದೇನೆಂದರೆ— ಆತ್ಮದಲ್ಲಿ ಬಡವರಾಗಿರುವವರು ಧನ್ಯರು. ಪರಲೋಕ ರಾಜ್ಯವು ಅವರದು.” MBK 9.4

ಈ ವಾಕ್ಯಗಳು ಆಶ್ಚರ್ಯ ಚಕಿತರಾದ ಆ ಸಮೂಹದವರ ಕಿವಿಗಳಿಗೆ ಹೊಸದಾಗಿಯೂ ವಿಚಿತ್ರವಾಗಿಯೂ ಕೇಳಿಬಂದುವು. ತಾವು ಯಾಜಕರಿಂದಲೂ ಧರ್ಮೋಪದೇಶಕರಿಂದಲೂ ಕೇಳಿದವುಗಳಿಗೆ ವ್ಯತಿರಿಕ್ತವಾಗಿದ್ದುವು. ತಮ್ಮ ದುರಭಿಮಾನವನ್ನು ಶ್ಲಾಘಿಸಲಾದರೂ ಅಥವಾ ತಮ್ಮ ಹೆಬ್ಬಯಕೆಯ ನಿರೀಕ್ಷೆಯ ತೃಪ್ತಿಗಾದರೂ ಈ ವಾಕ್ಯಗಳಲ್ಲಿ ಯಾವುದನ್ನೂ ಕಾಣಲಿಲ್ಲ. ಆದರೂ ಈ ನೂತನ ಧರ್ಮೋಪದೇಶಕನಲ್ಲಿ ಇವರನ್ನು ಮುಗ್ಧರನ್ನಾಗಿ ಮಾಡುವ ಯಾವುದೋ ಒಂದು ಶಕ್ತಿಯು ಇದೆ. ಪುಷ್ಪಗಳಿಂದ ಹೊರಸೂಸುವ ಪರಿಮಳದಂತೆ ಆತನ ಪ್ರಸನ್ನತೆಯಿಂದಲೇ ದೈವಪ್ರೀತಿಯ ಮಾಧುರ್ಯವು ಹೊರಹೊಮ್ಮುತ್ತಿದೆ. ಆತನ ವಾಕ್ಯಗಳು “ಹುಲ್ಲು ಕೊಯಿದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಠಿಯಂತೆಯೂ, ಭೂಮಿಯನ್ನು ನೆನಸುವ ಹದಮಳೆಯಂತೆಯೂ” (ಕೀರ್ತನೆ 72:6) ಸುರಿಯುತ್ತವೆ. ಆತ್ಮಗಳ ರಹಸ್ಯಗಳನ್ನು ಗ್ರಹಿಸಬಲ್ಲ ಒಬ್ಬಾತನು ಇಲ್ಲಿದ್ದಾನೆಂತಲೂ, ಕೋಮಲ ಅನುಕಂಪದಿಂದ ಅವರ ಬಳಿಗೆ ಬರುತ್ತಿರುವನೆಂತಲೂ ಸಹಜ ಪ್ರವೃತ್ತಿಯಿಂದ ಎಲ್ಲರ ಅಭಿಪ್ರಾಯ ಪಡುತ್ತಾರೆ. ಅವರ ಹೃದಯಗಳು ಆತನಿಗೆ ತೆರೆಯಲ್ಪಟ್ಟವು, ಮತ್ತು ಅವರು ಆತನ ಉಪದೇಶವನ್ನು ಕೇಳುತ್ತಿರಲು, ಪರಿಶುದ್ಧಾತ್ಮನು ಎಲ್ಲಾ ಯುಗಗಳ ಮಾನವರು ಅವಶ್ಯವಾಗಿ ಕಲಿಯಬೇಕಾದ ಪಾಠದ ಅರ್ಥವನ್ನು ಅವರಿಗೆ ಪ್ರಕಟಿಸುತ್ತಾನೆ. MBK 9.5

ಕ್ರಿಸ್ತನ ಕಾಲದಲ್ಲಿ ಮತಾಧಿಕಾರಿಗಳು ತಾವು ಆತ್ಮೀಯ ರೀತಿಯಲ್ಲಿ ಸಂಪನ್ನರೆಂದು ಅಭಿಪ್ರಾಯ ಪಟ್ಟರು. ಪರಿಸಾಯನು ಮಾಡಿದ ಪ್ರಾರ್ಥನೆಯು, “ದೇವರೇ, ಉಳಿದ ಜನರಂತೆ ನಾನಲ್ಲ, ಆದುದರಿಂದ ನಿನಗೆ ಸ್ತೋತ್ರಮಾಡತ್ತೇನೆ,” ಲೂಕ 18:11, ಇವನ ಪಂಗಡದವರ ಹಾಗೂ ಇವನ ಜನಾಂಗದವರ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತದೆ. ಆದರೆ ಯೇಸುವನ್ನು ಸುತ್ತುವರಿದಿದ್ದ ಅನೇಕರು ತಮ್ಮ ಆತ್ಮೀಯ ದಾರಿದ್ರ್ಯವನ್ನು ಮನಗಂಡಿದ್ದರು. ಆಶ್ಚರ್ಯರೀತಿಯಲ್ಲಿ ಮೀನನ್ನು ದೊರಕಿಸಿದುದರಲ್ಲಿ ಕ್ರಿಸ್ತನ ದೈವೀಕಶಕ್ತಿಯು ಪ್ರಕಟವಾದಾಗ ಪ್ರೇತನು ಆಶ್ಚರ್ಯದಿಂದ “ಸ್ವಾಮಿ, ನಾನು ಪಾಪಾತ್ಮನು: ನನ್ನನ್ನು ಬಿಟ್ಟು ಹೋಗಬೇಕು,” ಎಂದು ಪ್ರಾರ್ಥಿಸಿದನು. ಲೂಕ 5:8; ಹಾಗೆಯೇ ಪರ್ವತದ ಮೇಲೆ ಕೂಡಿದ್ದ ಜನಸಮೂಹದವರಲ್ಲಿ ಅನೇಕ ಆತ್ಮಗಳು ಆತನ ಪವಿತ್ರತೆಯ ಸಮುಖದಲ್ಲಿ ತಾವು “ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವರೂ, ದೌರ್ಭಾಗ್ಯರೂ, ದರಿದ್ರರೂ, ಕರುಡರೂ, ಬಟ್ಟೆಯಿಲ್ಲದವರೂ” (ಪ್ರಕಟನೆ 3:17), ಎಂದು ಗ್ರಹಿಸಿದರು; ಮತ್ತು “ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯನ್ನು” (ತೀತ 2:11) ಬಯಸಿದರು. ಕ್ರಿಸ್ತನ ಈ ಅಭಿನಂದನಾ ವಾಕ್ಯಗಳು ಈ ಆತ್ಮ ಗಳಲ್ಲಿ ನಿರೀಕ್ಷೆಯನ್ನು ಉದ್ರೇಕಿಸಿದುವು; ತಮ್ಮ ಜೀವನವೆಲ್ಲಾ ದೇವರ ಅನುಗ್ರಹಕ್ಕೊಳಗಾಗಿವೆ ಎಂದು ಮನಗಂಡರು. MBK 10.1

ತಾವು “ಐಶ್ವರ್ಯವಂತರು, ಸಂಪನ್ನರು, ಒಂದರಲ್ಲಿಯೂ ಕೊರತೆಯಿಲ್ಲದವರು” (ಪ್ರಕಟನೆ 3:17), ಎಂದು ಹೇಳಿಕೊಂಡವರಿಗೆ ಯೇಸುವು ಆಶೀರ್ವಾದ ಪಾತ್ರೆಯನ್ನು ಅನುಗ್ರಹಿಸಿದನು, ಅವರಾದರೋ ಆತನ ಕೃಪೆಯ ದಾನವನ್ನು ತೃಣೀಕರಿಸಿದರು. ಯಾವನು ತಾನು ಪರಿಪೂರ್ಣನೆಂದೂ, ನ್ಯಾಯವಾಗಿ ತಾನು ಒಳ್ಳೆಯವನೆಂದೂ, ತನ್ನ ಸ್ಥಿತಿಯಲ್ಲಿ ತೃಪ್ತಿಯುಳ್ಳವನಾಗಿರುವನೋ ಅಂಥವನು ಕ್ರಿಸ್ತನ ಕೃಪೆ ಮತ್ತು ನೀತಿಯಲ್ಲಿ ಪಾಲುಗಾರನಾಗಲು ಇಚ್ಛಿಸನು. ಗರ್ವವು ಅವಶ್ಯಕತೆಯನ್ನು ಯೋಚಿಸದು, ಆದುದರಿಂದ ಇದು ಕ್ರಿಸ್ತನಿಗೂ ಮತ್ತು ಆತನು ಕೊಡಲಿಚ್ಛಿಸಿದ ಅನಂತ ಆಶೀರ್ವಾದಗಳಿಗೂ ತನ್ನ ಹೃದಯವನ್ನು ತೆರೆಯುವುದಿಲ್ಲ. ಅಂಥ ಮನುಷ್ಯನ ಹೃದಯದಲ್ಲಿ ಕ್ರಿಸ್ತನಿಗೆ ತಾವಿಲ್ಲ. ತಮ್ಮ ಸ್ವಂತ ದೃಷ್ಟಿಯಲ್ಲಿ ಐಶ್ವರ್ಯವಂತರೂ ಕೀರ್ತಿಯುತರೂ ಆದವರು ನಂಬಿಕೆಯಿಂದ ದೇವರ ಆಶೀರ್ವಾದಗಳನ್ನು ಕೇಳಿ ಹೊಂದಲಾರರು. ತಾವು ಸಂಪೂರ್ಣ ಸಂಪನ್ನರೆಂದು ನೆನಸುತ್ತಾರೆ, ಆದುದರಿಂದ ಬರಿದಾಗಿ ಹೋಗುತ್ತಾರೆ. ಯಾರು ತಮ್ಮನ್ನು ತಾವೇ ರಕ್ಷಿಸಿಕೊಳ್ಳದಾಗದೆಂದು ಅಥವಾ ತಾವೇ ಯಾವ ನೀತಿಕ್ರಿಯೆಯನ್ನೂ ಮಾಡಲು ಸಾಧ್ಯವಿಲ್ಲವೆಂದು ಅರಿತಿದ್ದಾರೋ ಅಂಥವರೇ ಕ್ರಿಸ್ತನು ಕೊಡಬಹುದಾದ ಒತ್ತಾಸೆಯನ್ನು ಶ್ಲಾಘಿಸುತ್ತಾರೆ. ಆತ್ಮದಲ್ಲಿ ಬಡವರಾಗಿರುವವರನ್ನೇ ಆತನು ಆಶೀರ್ವದಿಸಲ್ಪಟ್ಟವರೆಂದು ಪ್ರಕಟಿಸುತ್ತಾನೆ. MBK 11.1

ಕ್ರಿಸ್ತನು ಯಾರನ್ನು ಕ್ಷಮಿಸುತ್ತಾನೋ, ಅವರನ್ನು ಆತನೇ ಮೊದಲು ತಿದ್ದುತ್ತಾನೆ. ಪಾಪದ ಅರುಹನ್ನು ಹುಟ್ಟಿಸುವುದು ಪವಿತ್ರಾತ್ಮನ ಕರ್ತವ್ಯ. ದೇವರ ಆತ್ಮನ ಮೂಲಕವಾಗಿ ಪಾಪಜ್ಞಾನದ ಅರುಹು ಉಂಟಾಗಿ ಯಾರ ಹೃದಯಗಳು ಪ್ರೇರಿಸಲ್ಪಡುತ್ತವೋ ಅಂಥವರು ತಮ್ಮಲ್ಲಿ ಸುಕೃತವು ಲೇಸಾದರೂ ಇಲ್ಲವೆಂದು ಗ್ರಹಿಸುವರು. ತಾವು ಮಾಡಿರುವುದೆಲ್ಲಾ ಸ್ವಾರ್ಥತೆ ಮತ್ತು ಪಾಪಗಳೊಡನೆ ಮಲಿತವಾಗಿದ್ದುವೆಂದು ಮನಗಾಣುವರು. ಆ ಬಡ ಸುಂಕದವನೋಪಾದಿಯಲ್ಲಿ ದೂರದಲ್ಲಯೇ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡಲೂ ಒಲ್ಲದೆ “ದೇವರೇ ಪಾಪಿಯಾದ ನನ್ನನ್ನು ಕರುಣಿಸು” ಲೂಕ 18:3, ಎಂದು ಮನವಿ ಮಾಡುತ್ತಾರೋ, ಅವರು ಆಶೀರ್ವದಿಸಲ್ಪಡುತ್ತಾರೆ. ಪಶ್ಚಾತ್ತಾಪ ಪಟ್ಟವರಿಗೆ ಕ್ಷಮಾಪಣೆ ನಿಶ್ಚಯ; ಯಾಕೆಂದರೆ ಕ್ರಿಸ್ತನೇ “ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.” ಯೋಹಾನ 1:29. ದೇವರ ವಾಗ್ದಾ ನವೇನಂದರೆ: “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವುವು; ಕಿರಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು” “ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು……….ನನ್ನ ಆತ್ಮವನ್ನು ನಿಮ್ಮಲ್ಲಿ ನಲಸುವಂತೆ ಅನುಗ್ರಹಿಸುವೆನು.” ಯೆಶಾಯ 1:18; ಯೆಹೆಜ್ಕೇಲ 36:26,27. MBK 11.2

ಆತ್ಮದಲ್ಲಿ ಬಡವರಾಗಿರುವವರ ವಿಷಯದಲ್ಲಿ “ಪರಲೋಕ ರಾಜ್ಯವು ಅವರದು” ಎಂದು ಕ್ರಿಸ್ತನು ಹೇಳುತ್ತಾನೆ. ಆತನ ಉಪದೇಶವನ್ನು ಕೇಳಿದವರು ನಿರೀಕ್ಷಿಸಿದಂತೆ ಈ ರಾಜ್ಯವು ಪ್ರಾಪಂಚಿಕವಾದ ರಾಜ್ಯವಲ್ಲ. ಕ್ರಿಸ್ತನು ಮನುಷ್ಯರಿಗೆ ತನ್ನ ಪ್ರೀತಿಯ, ಕೃಪೆಯ, ನೀತಿಯ ಮತ್ತು ಆತ್ಮೀಯ ರಾಜ್ಯವನ್ನು ತೆರೆದಿಟ್ಟನು. ಮೆಸ್ಸೀಯನ ಪ್ರಭುತ್ವದ ಧ್ವಜವು ಮನುಷ್ಯಕುಮಾರನ ಸಾದೃಶ್ಯದ ಕುರುಹಾಗಿದೆ. ಆತ್ಮದಲ್ಲಿ ಬಡವರಾಗಿರುವವರೂ ದೀನರೂ ಮತ್ತು ಆತನ ನೀತಿಯ ನಿಮಿತ್ತವಾಗಿ ಹಿಂಸೆಗೊಳಗಾದವರೂ ಆತನ ಪ್ರಜೆಗಳಾಗಿರುವರು. ಪರಲೋಕ ರಾಜ್ಯವು ಇಂಥವರದೇ. ಸಂಪೂರ್ಣವಾಗಿ ಈಡೇರಿಲ್ಲವಾದರೂ, “ಬೆಳಕಿನ ರಾಜ್ಯದೊಳಗೆ ದೇವರ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ.........ಯೋಗ್ಯರಾಗುವಂತೆ” ಕೊಲೊಸ್ಸೆ 1:12, ಕಾರ್ಯವು ಅವರಲ್ಲಿ ಆರಂಭವಾಗಿದೆ. MBK 12.1

ತಮ್ಮ ಆತ್ಮದ ಬಡತನವನ್ನು ಅರಿತಿರುವವರೆಲ್ಲರೂ, ಮತ್ತ ತಮ್ಮಲ್ಲಿ ಸುಕೃತವು ಲೇಸಾದರೂ ಇಲ್ಲವೆಂದು ತಿಳೀದಿರುವವರೆಲ್ಲರೂ, ಕ್ರಿಸ್ತನನ್ನು ದೃಷ್ಟಿಸಿ ರಕ್ಷಣೆಯನ್ನೂ ಮತ್ತು ಶಕ್ತಿಯನ್ನೂ ಹೊಂದಬಹುದು. “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ” ಮತ್ತಾಯ 11:28, ಎಂದು ಕರೆಯುತ್ತಾನೆ. ನಿಮ್ಮ ದಾರಿದ್ರ್ಯವನ್ನು ಆತನ ಕೃಪೆಯ ಐಶ್ವರ್ಯದೊಡನೆ ಬದಲಾಯಿಸಿಕೊಳ್ಳುವಂತೆ ನಿಮ್ಮನ್ನು ಕರೆಯುತ್ತಾನೆ. ನಾವು ದೇವರ ಪ್ರೀತಿಯನ್ನು ಹೊಂದಲು ಯೋಗ್ಯರಲ್ಲ. ಆದರೆ ನಮ್ಮ ಹೊಣೆಗಾರನಾದ ಕ್ರಿಸ್ತನು ಯೋಗ್ಯನಾಗಿದ್ದಾನೆ, ಮತ್ತು ಆತನ ಬಳಿಗೆ ಬರುವವರನ್ನು ರಕ್ಷಿಸಲು ಅಪರಿಮಿತ ಶಕ್ತಿಯುಳ್ಳವನಾಗಿದ್ದಾನೆ. ನಿಮ್ಮ ಹಿಂದಣ ಅನುಭವಗಳು ಏನೇ ಆಗಿದ್ದರೂ, ನಿಮ್ಮ ಈಗಿನ ಪರಿಸ್ಥಿತಿಯು ಎಷ್ಟೇ ಉತ್ಸಾಹರಹತವಾದುದ್ದಾಗಿದ್ದರೂ, ನೀವಿರುವ ಸ್ಥಿತಿಯಲ್ಲಿಯೇ, ನಿಶ್ಯಕ್ತ, ಸಹಾಯಶೂನ್ಯ ಮತ್ತು ಹತಾಶಾ ಸ್ಥಿತಿಯಲ್ಲಿಯೇ ಆತನ ಬಳಿಗೆ ಬಂದರೆ, ಕರುಣಾಮಯಿಯಾದ ನಮ್ಮ ರಕ್ಷಕನು ನಿಮ್ಮನ್ನು ಬಹು ದೂರದಲ್ಲೇ ಎದುರುಗೊಂಡು ತನ್ನ ಪ್ರೀತಿಯ ಕರಗಳಿಂದ ನಿಮ್ಮನ್ನು ಅಪ್ಪಿ ತನ್ನ ನೀತಿಯ ವಸ್ತ್ರವನ್ನು ನಿಮಗೆ ಹೊದಿಸುವನು. ತನ್ನ ಗುಣಗಳೆಂಬ ಬಿಳೀ ವಸ್ತ್ರಗಳನ್ನು ತೊಡಿಸಿ ನಮ್ಮನ್ನು ತಂದೆಯ ಸನ್ನಿಧಿಗೆ ಒಯ್ಯುತ್ತಾನೆ. ಆತನು ನಮ್ಮ ಸಲು ವಾಗಿ ದೇವರ ಬಳಿ ವಾದಿಸುತ್ತಾ: ನಾನು ಪಾಪಿಯ ಸ್ಥಾನವನ್ನು ವಹಿಸಿದ್ದೇನೆ. ಈ ಹಟಮಾರಿ ಮಗುವನ್ನು ನೋಡಬೇಡ, ಆದರೆ ನನ್ನನ್ನು ನೋಡು ಎನ್ನುತ್ತಾನೆ. ಸೈತಾನನು ಘರ್ಜಿಸುತ್ತಾ ನಮ್ಮ ಆತ್ಮಗಳಿಗಾಗಿ ವಾದಿಸುತ್ತಾ, ಪಾಪದ ವಿಷಯದಲ್ಲಿ ನಮ್ಮ ಮೇಲೆ ದೂರು ಹೊರಿಸುತ್ತಾ, ನಮ್ಮನ್ನು ತನ್ನವರೆಂದು ಸಮರ್ಥಿಸುವಾಗ, ಕ್ರಿಸ್ತನ ರಕ್ತವು ಅಧಿಕ ಶಕ್ತಿಯಿಂದ ನಮಗಾಗಿ ವಾದಿಸುವುದು. MBK 12.2

“ಯೆಹೋವನಲ್ಲಿ ಮಾತ್ರ ಸತ್ಯಕಾರ್ಯಗಲೂ ಶಕ್ತಿಯೂ ಉಂಟು……..ಇಸ್ರಾಯೇಲಿನ ಸಮಸ್ತ ಸಂತತಿಯವರೂ ಯೆಹವನ ಮೂಲಕ ಸತ್ಯವಂತರಾಗಿ ಆತನಲ್ಲಿ ಆನಂದಿಸುವರು…………” ಯೆಶಾಯ 45:24-25. MBK 13.1

“ದುಃಖಪಡುವವರು ಧನ್ಯರು; ಅವರು ಸಮಾಧಾನ ಹೊಂದುವರು.” MBK 13.2

ಇಲ್ಲಿ ದುಃಖಪಡುವವರೆಂದರೆ ಪಾಪಕ್ಕಾಗಿ ದುಃಖಪಡುವ ಯಥಾರ್ಥ ಹೃದಯವನ್ನು ಕುರಿತು ಹೇಳುವುದಾಗಿದೆ. “ನಾನು ಭೂಮಿಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳಕೊಳ್ಳುವೆನು.” ಯೋಹಾನ 12:32, ಎಂದು ಯೇಸುವು ಹೇಳುತ್ತಾನೆ. ಒಬ್ಬನು ಯೇಸುವು ಕ್ರೂಜೆಗೇರಿಸಲ್ಪಟ್ಟಿರುವುದನ್ನು ನೋಡಲು ಆಕರ್ಷಿಸಲ್ಪಟ್ಟಾಗ ಮಾನವನ ಪಾತಕವನ್ನ ಗ್ರಹಿಸಿಕೊಳ್ಳುತ್ತಾನೆ. ಮಹಿಮೆಯ ಕರ್ತನನ್ನು ಕೊರಡೆಗಳಿಂದ ಹೊಡೆದು ಶಿಲುಬೆಗೆ ಹಾಕಿದ್ದು ಪಾಪವೇ ಎಂದು ಅರಿತುಕೊಳ್ಳುವನು. ಹೇಳತೀರದ ದಯಾರ್ದ್ರ ಹೃದಯದಿಂದ ಪ್ರೀತಿಸಲ್ಪಟ್ಟಾಗಲೂ ಅವನ ಜೀವಮಾನವೆಲ್ಲಾ ಸತತವೂ ಕೃತಘ್ನತೆಯಿಂದಲೂ ಪ್ರತಿಭಟನೆಯಿಂದಲೂ ಕೂಡಿದ ರಂಗಭೂಮಿಯಾಗಿತ್ತು. ಅವನು ತನ್ನ ಅಮೂಲ್ಯಮಿತ್ರನನ್ನು ತಿರಸ್ಕರಿಸಿದ್ದಾನೆ, ಮತ್ತು ಪರಲೋಕದ ಅತಿಶ್ರೇಷ್ಠ ದಾನವನ್ನು ತೆಗಳಿದ್ದಾನೆ. ಮನುಷ್ಯಕುಮಾರನನ್ನು ತನ್ನ ಭಾಗಕ್ಕೆ ಹೊಸದಾಗಿ ಕ್ರೂಜೆಗೆ ಜಡಿದಿದ್ದಾನೆ, ಮತ್ತು ದುಃಖದಿಂದ ನೊಂದು ರಕ್ತವು ಧಾರೆಯಾಗಿ ಹರಿಯುತ್ತಿರುವ ಹೃದಯವನ್ನು ಪುನಃ ಇರಿದಿದ್ದಾನೆ. ಮಹಾ ಆಳವೂ ಅಗಲವೂ ಮತ್ತು ಗಾಡಾಂಧಕಾರದಿಂದ ತುಂಬಿದ ಪಾಪಕಂದರವು ಇವನನ್ನು ದೇವರಿಂದ ಬೇರ್ಪಡಿಸಿದೆ, ಮತ್ತು ಹತಾಶ ಹೃದಯನಾಗಿ ಇವನು ದುಃಖಪಡುತ್ತಿದ್ದಾನೆ. MBK 13.3

ಅಂಥ ದುಃಖಪಡುವವರು “ಸಮಾಧಾನ ಹೊಂದುವರು.” ದೇವರು ನಮ್ಮ ಅಪರಾಧಗಳನ್ನು ನಮಗೆ ಗೋಚರಪಡಿಸಿ ನಾವು ಕ್ರಿಸ್ತನ ಬಳಿಗೆ ಓಡಿ ಆತನ ಮೂಲಕವಾಗಿ ಪಾಪಬಂಧನದಿಂದ ಪಾರಾಗಿ ದೇವರ ಮಕ್ಕಳ ಸ್ವಾತಂತ್ರದಲ್ಲಿ ಉಲ್ಲಾಸಿಸುವಂತೆ ಮಾಡುತ್ತಾನೆ. ಯಥಾರ್ಥವಾದ ಪಶ್ಚಾತ್ತಾಪದಿಂದ ಕ್ರೂಜೆಯಡಿಗೆ ಒಂದು ನಮ್ಮ ಹೊರೆಗಳನ್ನು ಇಳುಹಬಹುದು. MBK 13.4

ಸಂಕಟದಲ್ಲಿಯೋ ಅಥವಾ ವಿಯೋಗದಲ್ಲಿಯೋ ಸಿಕ್ಕಿ ನರಳುವವರಿಗೂ ನಮ್ಮ ರಕ್ಷಕನ ವಾರ್ತೆಗಳು ಉಪಶಮನದ ಸುವಾರ್ತೆಯನ್ನೊಳಗೊಂಡಿವೆ. ನಮ್ಮ ವ್ಯಥೆಗಳು ಭೂಮಿಯೊಳಗಿಂದ ಉದ್ಭವಿಸುವುದಿಲ್ಲ. ದೇವರಿಗೆ “ನರಜನ್ಮದವರನ್ನು ಬಾಧಿಸಿ ವ್ಯಥೆಗೊಳಿಸುವುದು ಇಷ್ಟವಿಲ್ಲ.” ಪ್ರಲಾಪ 3:33 ಆತನು ಸಂಕಟಗಳನ್ನೂ ಶೋಧನೆಗಳನ್ನೂ ಬರಮಾಡುವಾಗ “ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶೆಕ್ಷಿಸುತ್ತಾನೆ.” ಇಬ್ರಿಯ 12:10 ನಂಬಿಕೆಯಿಂದ ಇವಿಗಳನ್ನು ಸ್ವೀಕರಿಸಿದರೆ ಸಹಿಸಲಸದಳವಾಗಿಯೂ ನಿಷ್ಠುರವಾಗಿಯೂ ತೋರುವ ಈ ಶೋಧನೆಗಳೇ ಆಶೀರ್ವಾದವಾಗಿ ಪರಿಣಮಿಸುವುವು. ಭೂಮಿಯ ಸಂತೋಷಗಳನ್ನು ಕೆಡಿಸುವ ನಿಷ್ಕಾರುಣ್ಯ ಪೆಟ್ಟು ನಮ್ಮ ದೃಷ್ಟಿಯನ್ನು ಪರಲೋಕದ ಕಡೆಗೆ ತಿರುಗಿಸಲು ಸಾಧನವಾಗಿದೆ. ವ್ಯಥೆ ಸಂಕಟಗಳು ಜನರನ್ನು ಯೇಸುವಿನಲ್ಲಿ ಉಪಶಮನ ಹೊಂದುವಂತೆ ನಡಿಸದಿದ್ದರೆ ಆತನನ್ನು ಅರಿಯದೆ ಎಷ್ಟೋ ಜನರಿರುತ್ತಿದ್ದರು! MBK 14.1

ಜೀವನದಲ್ಲುಂಟಾಗುವ ಶೋಧನೆಗಳು ನಮ್ಮ ಗುಣಗಳಂದ ಅಸಂಸ್ಕ್ರತ ಮತ್ತು ಮಲಿನತ್ವಗಳನ್ನು ನೀಗಿಸುವ ದೇವರ ಕಾರ್ಯಕರ್ತೃಗಳು. ಅವುಗಳ ಕೆತ್ತನೆಯೂ ಉಳಿಯ ಪೆಟ್ಟುಗಳೂ, ಒಪ್ಪವಿಡುವಿಕೆಯೂ ಮತ್ತು ಹೊಳಪಾಗುವಂತೆ ಉಜ್ಜುವುದೂ ವೇದನೆಯಿಂದ ಕೂಡಿದ ಕಾರ್ಯಗತಿಯಾಗಿವೆ; ಸಾಣಿಯ ಕಲ್ಲಿನಲ್ಲಿ ಮಸೆಯಲ್ಪಡುವುದು ಕಠೋರವಾಗಿ ಕಾಣುತ್ತದೆ. ಆದರೂ ಆ ಕಲ್ಲು ಪರಲೋಕ ದೇವಾಲಯದಲ್ಲಿ ತನ್ನ ಸ್ಥಳವನ್ನಾಕ್ರಮಿಸಕು ಸಿದ್ಧವಾಗಿ ತರಲ್ಪಡುತ್ತದೆ. ಅಪ್ರಯೋಜಕ ಪದಾರ್ಥಗಳಿಗೆ ನಮ್ಮ ಕರ್ತನು ಅಷ್ಟು ಗಮನ ಕೊಟ್ಟು ಪಕ್ಕಾ ಕೆಲಸವನ್ನು ಮಾಡುವನು. ಆತನ ಅಮೂಲ್ಯ ರತ್ನಗಳು ಮಾತ್ರವೇ ಒಂದು ಅರಮನೆಯ ಸಾದೃಶ್ಯಕ್ಕೆ ಕೆತ್ತಲ್ಪಟ್ಟು ಒಪ್ಪವಿಡಲ್ಪಡುತ್ತವೆ. MBK 14.2

ಆತನಲ್ಲ ಭರವಸವಿಡುವವರೆಲ್ಲರಿಗಾಗಿಯೂ ಆತನು ದುಡಿಯುತ್ತಾನೆ. ನಂಬಿಗಸ್ಥರಿಗೆ ಅಮೂಲ್ಯ ಜಯವು ಲಭಿಸುತ್ತದೆ. ಅಮೂಲ್ಯ ಪಾಠಗಳನ್ನು ಕಲಿಯುತ್ತಾರೆ. ಅಮೂಲ್ಯ ಅನುಭವಗಳು ಸಿದ್ಧಯಾಗುತ್ತವೆ. MBK 14.3

ವ್ಯಥಾಪೀಡಿತರ ವಿಷಯದಲ್ಲ ನಮ್ಮ ಪರಮತಂದೆಯು ಅಂತಃಕರಣವಿಲ್ಲದವನಲ್ಲ. “ದಾವೀದನು ಮೋರೆಯನ್ನ ಮುಚ್ಚಿಕೊಂಡು ಅಳುತ್ತಾ ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿ” ದಾಗ (2 ಸಮುವೇಲ 15:30) ದೇವರು ಕನಿಕರದಿಂದ ಅವನನ್ನು ನೋಡತ್ತಿದ್ದನು. ದಾವೀದನು ಗೋಣೀತಟ್ಟನ್ನು ಮೊದ್ದಿದ್ದನು, ಮತ್ತು ಅವನ ಆತ್ಮಸಾಕ್ಷಿಯು ಅವನನ್ನ ಪೀಡಿಸುತ್ತಿತ್ತು. ಅವನ ಹೊರಗಿನ ದೀನಭಾವವು ಅವನ ಯಥಾರ್ಥ ಪಶ್ಚಾತಾಪವನ್ನು ಸೂಚಿಸುತ್ತಿತ್ತು. ಅಶ್ರುಧಾರೆಯನ್ನು ಸುರಿಸುತ್ತಾ, ಹೃದಯವೇದನಾಪೂರಿತ ಧ್ವನಿಯಿಂದ ತನ್ನ ಅವಸ್ಥೆಯನ್ನು ದೇವರಲ್ಲಿ ವಿಜ್ಞಾಪಿಸಿಕೊಂಡನು, ಮತ್ತು ಕರ್ತನು ತನ್ನ ಸೇವಕನನ್ನು ಕೈಬಿಡಲಿಲ್ಲ. ತನ್ನ ಮಗನೆ ದಂಗೆಯೆದ್ದು, ದಾವೀದನು ತನ್ನ ಪ್ರಾಣರಕ್ಷಣಾರ್ಥವಾಗಿ ತನ್ನ ವಿರೋಧಿಗಳ ಸಮುಖದಿಂದ ಆತ್ಮಸಾಕ್ಷಿಪೀಡಿತನಾಗಿ ಓಡಿ ಹೋದಾಗ (ದೇವರ) ಅನಂತಪ್ರೀತಿಯ ಹೃದಯಕ್ಕೆ ಅತಿಪ್ರಿಯನಾದಂತೆ ಬೇರೆಂದೂ ಆಗಿರಲಿಲ್ಲ. “ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದದರಿಂದ ನನು ಆಸಕ್ತನಾಗಿರು; ದೇವರ ಕಡೆಗೆ ತಿರುಗಿಕೋ” ಪ್ರಕಟನೆ 3:19, ಎಂದು ಕರ್ತನು ನುಡಿಯುತ್ತಾನೆ. ಕ್ರಿಸ್ತನು ಜಜ್ಜಿಹೋದ ಹೃದಯವನ್ನು ಎತ್ತಿ ತನ್ನ ನಿವಾಸವಾಗುವ ಪರ್ಯಂತರ ದುಃಖಪಡುವ ಆತ್ಮವನ್ನು ಶುದ್ಧೀಕರಿಸುವನು. MBK 14.4

ಆದರೆ ಸಂಕಟಗಳು ನಮ್ಮನ್ನು ಮುತ್ತುವಾಗ, ನಮ್ಮಲ್ಲಿ ಎಷ್ಟು ಮಂದಿ ಯಾಕೋಬನಂತಿರುತ್ತೇವೆ! ಇದೆಲ್ಲಾ ನಮ್ಮ ವೈರಿಯ ಕೈವಾಡವೆಂದು ನೆನಸುತ್ತೇವೆ; ಅಂಧಕಾರದಲ್ಲಿ ಅಂಧತೆಯಿಂದ ನಮ್ಮ ಶಕ್ತಿಯು ಕುಂದಿಹೋಗುವವರೆವಿಗೂ ಹೋರಾಡಿ ಉಪಶಮನವನ್ನಾಗಲಿ ಅಥವಾ ಬಿಡುಗಡೆಯನ್ನಾಗಲಿ ಕಾಣದಾಗುತ್ತೇವೆ. ಉದಯವಾಗುವ ವೇಳೆಯಲ್ಲಿ ಯಾಕೋಬನು ದೈವಸ್ಪರ್ಶದಿಂದ ಸ್ಪೂರ್ತಿಗೊಂದು ತಾನು ಯಾರೊಡನೆ ಹೋರಾಡುತ್ತಿದ್ದನೆಂದು ಅರಿತನೋ,-ಆತನು ಒಡಂಬಡಿಕೆಯ ದೂತನೇ; ಯಾಕೋಬನು ರೋಧಿಸುತ್ತಾ ಸಹಾಯಶೂನ್ಯನಾಗಿ ಅನಂತ ಪ್ರೇಮದ ಎದೆಯನ್ನೊರಗಿದನು, ಅವನ ಆತ್ಮವು ಕೋರಿದ ಆಶೀರ್ವಾದವನ್ನು ಹೊಂದಿದನು. ಸಂಕಟಗಳು ನಮ್ಮ ಪ್ರಯೋಜನಾರ್ಥಕವಾಗಿಯೇ ಬರುತ್ತವೆಂದು ನಾವೂ ಕಲಿಯಬೇಕು, ಮಾತ್ರವಲ್ಲದೆ ದೇವರ ಶಿಕ್ಷೆಯನ್ನು ತಿರಸ್ಕರಿಸದೆ ಮತ್ತು ಆತನು ಗದರಿಸುವಾಗ ಬೇಸರಗೊಳ್ಳದೆ ಇರಬೇಕು. MBK 15.1

“ಇಗೋ ದವರು ಯಾವನನ್ನು ಶಿಕ್ಷಿಸುವನೋ ಅವನು ಧನ್ಯನು;…… ಗಾಯಮಾಡುವವನೂ ಗಾಯಕಟ್ಟುವವನೂ ಆತನೇ; ಹೊಡೆಯುವ ಕೈಯೇ ವಾಸಿಮಾಡುತ್ತದೆ. ಆರು ಇಕ್ಕಟ್ಟುಗಳಿಂದ ಆತನು ನಿನ್ನನ್ನು ಬಿಡಿಸುವನು; ಏನೇ ಇಕ್ಕಟ್ಟು ಉಂಟಾದರೂ ಯಾವ ಕೇಡೂ ನಿನ್ನನ್ನು ಮುಟ್ಟಾದು.” ಯೋಬ 5:17-19. ಭಾದೆಪಡುವ ಪ್ರತಿಯೊಬ್ಬರ ಬಳಿಗೂ ಯೇಸುವು ಸ್ವಸ್ಥೆತೆಯನ್ನೆಸ ಗಲಿ ಸಿದ್ಧನಾಗಿ ಬರುತ್ತಾನೆ. ವಿಯೋಗಜೀವನ, ಬಾಧೆ ಮತ್ತು ಸಂಕಟಗಳು ಆತನ ಪ್ರಸನ್ನತೆಯ ಅಮೂಲ್ಯ ಪ್ರಕಟನೆಯಿಂದ ಹುರುಪುಗೊಳ್ಳುತ್ತವೆ. MBK 15.2

ನಾವು ಮೂಕವ್ಯಥೆಗಲಿಂದ ಪೀಡಿಸಲ್ಪಟ್ಟು ಹೃದಯವೇದನೆಯಿಂದ ಯಾತನೆಪಟ್ಟುಕೊಂಡಿರುವುದು ದೇವರಿಗೆ ಪ್ರಿಯವಲ್ಲ. ನಾವು ನಮ್ಮ ಕಣ್ಣುಗಳನ್ನು ಮೇಲೆತ್ತಿ ಆತನ ಪ್ರೇಮಪೂರಿತ ವದನವನ್ನು ನೋಡಬೇಕೆಂದು ಆತನು ಇಚ್ಛಿಸುತ್ತಾನೆ. ಅಶ್ರುಧಾರೆಯಿಂದ ಕಣ್ಣುಗಳು ಕುರುಡಾಗಿ ಆತನನ್ನು ಗ್ರಹಿಸಲಾರದ ಅನೇಕರ ಬಳಿಯಲ್ಲೇ ನಮ್ಮ ಪ್ರಿಯ ರಕ್ಷಕನು ನಿಂತಿದ್ದಾನೆ. ಆತನನ್ನು ವಿಶ್ವಾಸದಿಂದ ನೋಡಿ ನಮ್ಮ ಮಾರ್ಗದರ್ಶಕನಾಗಲು ಆತನಿಗೆ ಅನುಮತಿ ಕೊಟ್ಟರೆ ನಮ್ಮ ಕರಗಳನ್ನು ಹಿಡಿದು ನಡಿಸಲು ಆತನು ಹಾತೊರೆಯುತ್ತಾನೆ. ನಮ್ಮ ದುಃಖ, ವ್ಯಥೆ ಮತ್ತು ಶೋಧನೆಗಳಿಗೆ ಆತನ ಹೃದಯವು ಅನುಕಂಪಗೊಂಡಿದೆ. ತನ್ನ ಅನಂತ ಪ್ರೀತಿಯಿಂದ ನಮ್ಮನ್ನು ಪ್ರೀತಿಸಿ ಕರುಣೆಯಿಂದ ನಮ್ಮನ್ನು ಸುತ್ತುವರಿದಿದ್ದಾನೆ. ನಮ್ಮ ಹೃದಯಗಳು ಆತನ ಒಲುಮೆಯ ಧ್ಯಾನಮಗ್ನವಾಗಿರುವಂತೆಸಗಬೇಕು. ಆಗ ಆತನು ನಮ್ಮ ಆತ್ಮಗಳನ್ನು ಅನುದಿನದ್ ಕ್ಲೇಶ ಮತ್ತು ಭ್ರಮೆಗಳಿಂದ ಪಾರುಮಾಡಿ ಸಮಾಧಾನ ಸಾಮ್ರಾಜ್ಯಕ್ಕೆ ಸೇರಿಸುವನು. MBK 16.1

ಸಂಕಟ ಮತ್ತು ವ್ಯಸನ ಪೀಡಿತ ಮಕ್ಕಳೇ, ಇದನ್ನು ಗ್ರಹಿಸಿ ನಿರಕ್ಷೆಯಲ್ಲಿ ಉಲ್ಲಾಸಿಸಿರಿ. “ಲೋಕವನ್ನು ಜಯಿಸುವಂಥಾದ್ದು ನಮ್ಮ ನಂಬಿಕೆಯೇ.” 1 ಯೋಹಾನ 5:4. MBK 16.2

ಯೇಸುವಿನೊಡನೆ ಲೋಕದ ವ್ಯಥೆಗಾಗಿ ಸಹಾನುಭೂತಿಯಿಂದಲೂ ಮತ್ತು ಅದರ ಪಾಪಗಳಿಗಾಗಿ ಮರುಕದಿಂದಲೂ ದುಃಖಪಡುವವರು ಧನ್ಯರು. ಅಂಥಾ ದುಃಖಪಡುವಿಕೆಯಲ್ಲಿ ಸ್ವಾರ್ಥತೆಯಿಂದ ಕೂಡಿದ ಯೋಚನೆಯಿರುವುದಿಲ್ಲ. ಯೇಸುವು ಮಾತಿನಿಂದ ವರ್ಣಿಸಲಸದಳವಾದ ಹೃದಯಯತನೆಯನ್ನು ಸಹಿಸುವ ಸಂತಾಪಪೂರಿತ ಮನುಷ್ಯನಾಗಿದ್ದನು. ಮಾನವರ ಅತಿಕ್ರಮಣದಿಂದ ಆತನ ಆತ್ಮವು ಜಜ್ಜಲ್ಪಟ್ಟು ಛಿದ್ರಛಿದ್ರವಾಗಿತ್ತು. ಮಾನವರ ಕೊರತೆಯನ್ನು ಮತ್ತು ಅಳಲನ್ನು ನಿವಾರಿಸಲು ಆತನು ಸ್ವಯಂ ದಾಹ್ಯಶ್ರದ್ಧೆಯಿಂದ ದುಡಿದನು, ಮಾತ್ರವಲ್ಲದೆ ಮಹಾ ಜನಸ್ತೋಮವು ಆತನ ಬಳಿಗೆ ಬಂದು ನಿತ್ಯಜೀವವನ್ನು ಹೊಂದಲು ನಿರಾಕರಿಸುವುದನ್ನು ಕಂಡು ಆತನ ಹೃದಯವು ಸಂತಾಪದಿಂದ ಭಾರವಾಗಿತ್ತು. ಕ್ರಿಸ್ತನವರಾದವರೆಲ್ಲರೂ ಈ ಅನುಭವದಲ್ಲಿ ಭಾಗಿಗಳಾಗಿದ್ದಾರೆ. ಆತನ ಮಮತೆಯಲ್ಲಿ ಭಾಗವಹಿಸುವ ಹಾಗೆ, ತಪ್ಪಿಹೋದವರನ್ನು ಹುಡುಕಿ ರಕ್ಷಿಸುವ ಪ್ರಯಾಸದಲ್ಲಿಯೂ ಪ್ರವೇಶಿಸುವರು. ಕ್ರಿಸ್ತನ ಸಂಕಟಗಳಲ್ಲಿ ಪಾಲುಗಾರರಾಗಿ, ಬಹಿರಂಗವಾ ಗುವ ಮಹಿಮೆಯಲ್ಲಿಯೂ ಭಾಗಿಗಳಾಗುವರು. ಅವರು ಆತನ ಸೇವೆಯಲ್ಲಿ ಐಕ್ಯವಾಗಿ, ಆತನ ಸಂತಾಪಪೂರಿತ ಪಾತ್ರೆಯಲ್ಲಿ ಪಾನಮಾಡಿ, ಆತನ ಉಲ್ಲಾಸದಲ್ಲಿಯೂ ಭಾಗಿಗಳಾಗುವರು. MBK 16.3

ಯೇಸುವು ಶ್ರಮೆಯ ಮೂಲಕವೇ ಸಂತಯಿಸಲ್ಪಟ್ಟನು. ಮಾನವನ ಎಲ್ಲಾ ಕ್ಲೇಶಗಳಲ್ಲೂ ಆತನೂ ಕ್ಲೇಶಪಡುತ್ತಾನೆ; ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು. “ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯ ಮಾಡುವುದಕ್ಕೆ ಶಕ್ತನಾಗಿದ್ದಾನೆ” ಯೆಶಾಯ 63:9; ಇಬ್ರಿಯ 2:18. ಆತನ ಶ್ರಮೆಯಲ್ಲಿ ಸಹಭಾಗಿಗಳಾಗಿರುವ ಪ್ರತಿಯೊಂದು ಆತ್ಮವೂ ಈ ಸೇವೆಯಲ್ಲಿ ಭಾಗಿಯಾಗುವ ಹಂಗಿನಲ್ಲಿದೆ. “ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಆದರಣೆಯೂ ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ” 2 ಕೊರಿಂಥ 1:5. ದುಃಖಪಡುವವರಿಗೆ ದೇವರು ವಿಶೇಷ ಕೃಪೆ ತೋರುವವನಾಗಿದ್ದಾನೆ, ಮತ್ತು ಇದರ ಶಕ್ತಿಯು ಆತ್ಮಗಳ ರಕ್ಷಣಾರ್ಥವಾಗಿ ಹೃದಯಗಳನ್ನು ದ್ರವೀಕರಿಸುವುದಾಗಿದೆ, ಜಜ್ಜಲ್ಪಟ್ಟು ಗಾಯಗೊಂಡ ಆತ್ಮಗಳಿಗೆ (ಹೃದಯಗಳಿಗೆ) ಆತನ ಮಮತೆಯ ಕಾಲುವೆಯು ತೆರೆಯಲ್ಪಟ್ಟು, ಕ್ಲೇಶಗೊಂಡವರಿಗೆ ಉಪಶಮನದ ಮುಲಾಮು ಆಗುತ್ತದೆ. “ಆತನು ಕನಿಕರವುಳ್ಳ ತಂದೆಯೂ ಸಕಲ ವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ. ಹೀಗೆ ದೇವರಿಂದ ದಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವುದಕ್ಕೆ ಶಕ್ತರಾಗುತ್ತೇವೆ.” 2 ಕೊರಿಂಥ 1:3,4. MBK 17.1