ಕ್ರೈಸ್ತ ಸಭೆಗೆ ಹಿತವಚನಗಳು

287/307

ಹಿಂಸೆಯೆಂಬ ಬಿರುಗಾಳಿ ಎದುರಿಸಲು ಸಿದ್ಧತೆ

ದುಷ್ಟಜನರ ವಿರೋಧತೆ ಮತ್ತು ಉಗ್ರಕೋಪ ಎದುರಿಸಲು ತನ್ನ ಜನರು ಸಿದ್ಧರಾಗುವಂತೆ ಕೊನೆಯದಿನಗಳಲ್ಲಿ ಏನು ನಡೆಯುತ್ತದೆಂದು ದೇವರು ತಿಳಿಸಿದ್ದಾನೆ. ಮುಂದೆ ಬರಲಿರುವ ಘಟನೆಗಳ ಬಗ್ಗೆ ಎಚ್ಚರಿಕೆ ಕೊಡಲ್ಪಟ್ಟವರು, ದೇವರು ಅಂತಹ ಸಂಕಟದಸಮಯದಲ್ಲಿ ನಂಬಿಗಸ್ತರಾದ ತನ್ನ ಮಕ್ಕಳಿಗೆ ಆಶ್ರಯಕೊಡುತ್ತಾನೆಂದು, ತಮಗೆತಾವೇ ಆದರಣೆ ಹೊಂದಿಕೊಂಡು ಶಾಂತವಾಗಿ ಕುಳಿತು ಅವುಗಳನ್ನು ನಿರೀಕ್ಷಿಸುತ್ತಿರಬಾರದು. ನಾವು ದೇವರಿಗಾಗಿ ಕಾದುಕೊಂಡಿರುವುದರಿಂದ ವ್ಯರ್ಥವಾಗಿ ನಿರೀಕ್ಷೆ ಮಾಡದೆ, ದೃಢನಂಬಿಕೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳ ಬಗ್ಗೆ ನಮ್ಮ ಗಮನ ಹರಿಸಬಾರದು. ಜನರು ಆತ್ಮೀಕವಾಗಿ ನಿದ್ರಿಸುತ್ತಿರುವಾಗ, ದೇವರಮಕ್ಕಳಿಗೆ ಕರುಣೆ ಅಥವಾ ನ್ಯಾಯ ದೊರೆಯದಂತೆ ಸೈತಾನನು ಎಲ್ಲರೂ ಭಾನುವಾರದಂದೇ ದೇವಾರಾಧನೆ ಮಾಡಬೇಕೆಂದು ಒತ್ತಾಯಿಸುವ ಚಳುವಳಿಯು ರಹಸ್ಯವಾಗಿ ತನ್ನ ಕಾರ್ಯಮಾಡುತ್ತಿದೆ. ಅದರ ನಾಯಕರು ವಾಸ್ತವಾಂಶವನ್ನು ಮರೆಮಾಚುವುದರಿಂದ, ಈ ಚಳುವಳಿಯಲ್ಲಿ ಭಾಗವಹಿಸುವ ಅನೇಕರಿಗೆ ಕ್ರೈಸ್ತವಿರೋಧಿಯಾದ ಇದು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದರಲ್ಲಿ ನಿಷ್ಠೆಯಿದೆ ಎಂದು ಹೇಳಿಕೊಳ್ಳುವವರು ಬಹಳ ಸೌಮ್ಯಸ್ವಭಾವದವರಾಗಿದ್ದು, ಮೇಲುನೋಟಕ್ಕೆ ಕ್ರೈಸ್ತರಾಗಿರುವರು. ಆದರೆ ಭಾನುವಾರಾಚರಣೆಯ ಚಳುವಳಿಯ ನಾಯಕರು ಮಾತಾಡಿದಾಗ, ಘಟಸರ್ಪನ ಸ್ವಭಾವ ಕಂಡುಬರುವುದು. KanCCh 428.1

“ಮನುಷ್ಯರ ಕೋಪವೂ ನಿನ್ನ ಘನಕ್ಕೇ ಸಾಧಕವಾಗುವುದು; ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ” ಎಂದು ಕೀರ್ತನೆಗಾರನಾದ ಆಸಾಫನು ಹೇಳುತ್ತಾನೆ (ಕೀರ್ತನೆ 76:10). ಸತ್ಯದ ವಿರುದ್ಧವಾಗಿ ಎಂತಹ ಅವಹೇಳನ ಹಾಗೂ ಅಸಡ್ಡೆ ಮಾಡಿದರೂ, ಅದು ಪರಿಶೋಧಿಸಲ್ಪಟ್ಟಾಗ ಪ್ರಾಮುಖ್ಯತೆ ಹೊಂದಿ ಚರ್ಚೆಗೆ ಬರುತ್ತದೆ. ಆಗ ಜನರ ಮನಸ್ಸು ಅಲ್ಲೋಲಕಲ್ಲೋಲವಾಗಿ ಕಳವಳಗೊಳ್ಳಬೇಕು. ಪ್ರತಿಯೊಂದು ಹೋರಾಟ, ದೂಷಣೆ, ಸುಳ್ಳು ಸುದ್ದಿಯಿಂದಾಗುವ ಅಪನಿಂದನೆಗಳೆಲ್ಲವೂ ಆತ್ಮೀಕವಾಗಿ ನಿದ್ರಿಸುತ್ತಿರುವ ಮನಸ್ಸುಗಳನ್ನು ಬಡಿದೆಬ್ಬಿಸುವ ದೇವರ ಸಾಧನಗಳಾಗಿವೆ. KanCCh 428.2

ದೇವರು ನಮಗೆ ವಹಿಸಿರುವ ಕಾರ್ಯವನ್ನು ನಾವು ಇನ್ನೂ ಪೂರೈಸಿಲ್ಲ. ಕಡ್ಡಾಯವಾದ ಭಾನುವಾರಾಚರಣೆಯು ತರಲಿರುವ ವಿಷಯಗಳನ್ನು ಎದುರಿಸಲು ನಾವು ಇನ್ನೂ ಸಿದ್ಧರಾಗಿಲ್ಲ. ಮುಂದೆ ಬರಲಿರುವ ಸಂಕಟದ ಸೂಚನೆಗಳನ್ನು ನಾವು ನೋಡುವಾಗ, ಕ್ರಿಯಾಶೀಲರಾಗಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಪ್ರವಾದನೆಯಲ್ಲಿ ಈ ವಿಷಯ ಮುಂದಾಗಿ ತಿಳಿಸಲ್ಪಟ್ಟಿರುವುದರಿಂದ, ಕಷ್ಟಸಂಕಟದ ಸಮಯಗಳು ಬಂದೇಬರುತ್ತವೆ. ಆ ಕಾಲದಲ್ಲಿ ದೇವರು ತನ್ನಜನರನ್ನು ರಕ್ಷಿಸುತ್ತಾನೆಂಬ ನಂಬಿಕೆಯಿಂದ ನಾವೂ ಯಾರೂಸಹ ನಮ್ಮನ್ನು ನಾವೇ ಸಮಾಧಾನಮಾಡಿಕೊಂಡು, ಕೆಟ್ಟದ್ದನ್ನು ಶಾಂತರೀತಿಯಿಂದ ನಿರೀಕ್ಷಿಸುತ್ತಾ ಕುಳಿತಿರಬಾರದು. ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಯಾವುದೇ ಪ್ರಯತ್ನಮಾಡದೆ, ಸುಮ್ಮನೆ ಕುಳಿತಿದ್ದಲ್ಲಿ ನಾವು ದೇವರಚಿತ್ತವನ್ನು ನೆರವೇರಿಸುತ್ತಿಲ್ಲವೆಂದು ಅರ್ಥ. ಬಹಳ ಸಮಯದಿಂದಲೂ ನಿರ್ಲಕ್ಷಿಸಲ್ಪಟ್ಟಿದ್ದ ಕಾರ್ಯವನ್ನು ನಾವು ಸಾಧಿಸುವತನಕ, ಈ ಕಷ್ಟಸಂಕಟಗಳು ಮುಂದೂಡಲ್ಪಡಲೆಂದು ನಾವು ಉತ್ಸಾಹದಿಂದಲೂ ಹಾಗೂ ಪರಿಣಾಮಕಾರಿಯಾಗಿಯೂ ಮಾಡುವ ಪ್ರಾರ್ಥನೆಯು ಪರಲೋಕಕ್ಕೆ ಏರಿ ಹೋಗಬೇಕು. ಕಳಕಳಿಯಿಂದ ಮಾಡಿದ ಪ್ರಾರ್ಥನೆಗೆ ಅನುಗುಣವಾಗಿ ನಾವು ಕಾರ್ಯವನ್ನೂ ಮಾಡಬೇಕು. ಸೈತಾನನು ಜಯಹೊಂದಿದ್ದಾನೆ. ಸುಳ್ಳುತನವು ಸತ್ಯದಮೇಲೆ ಬಲಾತ್ಕಾರದಿಂದ ಗೆಲುವುಸಾಧಿಸಿದೆ ಎಂದು ಅನಿಸಬಹುದು. ದೇವರನ್ನು ರಕ್ಷಣೆಯಾಗಿಯೂ, ಗುರಾಣಿಯನ್ನಾಗಿಯೂ ಮಾಡಿಕೊಂಡಿರುವ ಭಕ್ತರು ಹಾಗೂ ಸತ್ಯವನ್ನು ಬಲವಾಗಿ ಸಮರ್ಥಿಸುವ ಆದರೆ ತಮ್ಮ ಮನಸ್ಸಾಕ್ಷಿಯು ದಬ್ಬಾಳಿಕೆಯಿಂದ ತುಳಿಯಲ್ಪಟ್ಟ ದೇವರ ಸೇವಕರಿಗೆ ಆಶ್ರಯವಾಗಿದ್ದ ದೇಶವು ಗಂಡಾಂತರಕ್ಕೊಳಗಾಗಬಹುದು. ಆದರೆ ಹಿಂದೆ ತಾನು ಹೇಗೆ ನಮ್ಮನ್ನು ಶತ್ರುಗಳಿಂದ ರಕ್ಷಿಸಿದ್ದ ಸಂಗತಿಗಳನ್ನು ನೆನಪಿಗೆ ತಂದುಕೊಳ್ಳಬೇಕೆಂದು ದೇವರು ನಮ್ಮಿಂದ ಬಯಸುತ್ತಾನೆ. ಸೈತಾನನ ಕುತಂತ್ರಗಳಿಂದ ಬಿಡುಗಡೆಯಾಗುವ ಅವಕಾಶದ ಸಾಧ್ಯತೆ ಇಲ್ಲವೆಂದು ನಾವು ಅಂದುಕೊಳ್ಳುವಾಗ, ತನ್ನ ಸಾಮರ್ಥ್ಯವನ್ನು ತೋರಿಸಲಿಕ್ಕಾಗಿ ಯಾವಾಗಲೂ ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿಯನ್ನು ದೇವರು ಆರಿಸಿಕೊಳ್ಳುತ್ತಾನೆ. ಮಾನವರ ಅಗತ್ಯವು ದೇವರ ಅವಕಾಶವಾಗಿದೆ (Man’s Necessity is God’s Opportunity). KanCCh 429.1

ಸಹೋದರರೇ, ನಿಮ್ಮ ಸ್ವಂತ ರಕ್ಷಣೆ ಹಾಗೂ ಇತರರಿಗೆ ಸಂಭವಿಸಲಿರುವ ಘಟನೆಗಳು ಮುಂದೆ ಬರಲಿರುವ ಶೋಧನೆಗಳನ್ನು ಎದುರಿಸಲು ನೀವು ಈಗ ಎಂತಹ ಸಿದ್ಧತೆ ಮಾಡಿಕೊಳ್ಳುವಿರೋ, ಅದರ ಮೇಲೆ ಆಧಾರಗೊಂಡಿದೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ವಿರೋಧತೆ ಬಂದಾಗ, ಅದನ್ನೂ ಎದುರಿಸಲು ಸಮರ್ಥರಾಗುವಂತಹ ದೈವೀಕ ಉತ್ಸಾಹ, ದೈವಭಕ್ತಿ, ಛಲವು ನಿಮ್ಮಲ್ಲಿದೆಯೇ? ಎಂದು ಶ್ರೀಮತಿವೈಟಮ್ಮನವರು ನಮ್ಮನ್ನು ಪ್ರಶ್ನಿಸುತ್ತಾರೆ. ನಿಮ್ಮನ್ನು ನ್ಯಾಯಾಧಿಪತಿಗಳ ಮುಂದೆ ಹಾಜರುಪಡಿಸುವರು, ಅಲ್ಲಿ ನೀವು ದೃಢವಾಗಿ ನಂಬಿಕೊಂಡಿರುವ ಪ್ರತಿಯೊಂದು ಸತ್ಯಸಿದ್ಧಾಂತಗಳನ್ನು ಬಲವಾಗಿ ಖಂಡಿಸುವ ಸಮಯ ಶೀಘ್ರದಲ್ಲಿಯೇ ಬರಲಿದೆ. ಈಗ ಅನೇಕರು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಂತವರು ಮುಂದೆಬರಲಿರುವ ಇಕ್ಕಟ್ಟನ್ನು ಎದುರಿಸಲು ಸಿದ್ಧರಾಗಿರಬೇಕೆಂದು ದೇವರುಕೊಟ್ಟಿರುವ ಆದೇಶದಂತೆ, ಆ ಸಮಯವನ್ನು ಉಪಯೋಗಿಸಬೇಕೆಂದೂ ದೇವರು ಶ್ರೀಮತಿವೈಟಮ್ಮನವರಿಗೆ ದರ್ಶನದಲ್ಲಿ ತಿಳಿಸಿದ್ದಾನೆ. KanCCh 429.2