ಕ್ರೈಸ್ತ ಸಭೆಗೆ ಹಿತವಚನಗಳು
ಪರಿಶುದ್ಧತೆಯ ನಿಜವಾದ ಸಾಕ್ಷ್ಯಾಧಾರಗಳು
ನಮ್ಮ ರಕ್ಷಕನಾದ ಕ್ರಿಸ್ತನು ಲೋಕಕ್ಕೆ ನಿಜವಾದ ಬೆಳಕಾಗಿದ್ದನು. ಆದರೆ ಲೋಕವು ಅವನನ್ನು ಅರಿಯಲಿಲ್ಲ. ಆತನು ಎಲ್ಲರ ಮಾರ್ಗದಲ್ಲಿಯೂ ಬೆಳಕನ್ನು ನೀಡುತ್ತಾ, ಯಾವಾಗಲೂ ಕರುಣೆಯ ಕಾರ್ಯದಲ್ಲಿ ನಿರತನಾಗಿದ್ದನು. ಆತನು ತನ್ನ ಉದಾರಸ್ವಭಾವ, ತ್ಯಾಗಮನೋಭಾವ, ತನ್ನನ್ನುತಾನೇ ನಿರಾಕರಿಸುವ ಒಳ್ಳೆಯ ಸ್ವಭಾವಗಳ ಮೂಲಕ ತನ್ನ ಮಾದರಿ ಅನುಸರಿಸುವಂತೆ ತನ್ನ ಹಿಂಬಾಲಕರಿಗೆ ಹೇಳಿದನು. ಯೆಹೂದ್ಯರು ಕ್ರಿಸ್ತನ ಇಂತಹ ಮಾದರಿ ಜೀವಿತವನ್ನು ಇಷ್ಟಪಡಲಿಲ್ಲ. ತಮ್ಮ ತೋರಿಕೆಯ ಭಕ್ತಿಯಜೀವನಕ್ಕೆ ಆತನ ಜೀವನವು ವಿರುದ್ಧವಾಗಿದ್ದರಿಂದ, ಆತನ ಧರ್ಮವು ಯೋಗ್ಯವಲ್ಲವೆಂದು ಯೆಹೂದ್ಯರು ಅಭಿಪ್ರಾಯಪಟ್ಟರು. ಯೆಹೂದ್ಯರಧರ್ಮವು ಅಂಗಡಿಬೀದಿಗಳಲ್ಲಿ ಪ್ರಾರ್ಥಿಸುವುದು, ಎಲ್ಲರೂ ನೋಡುವಂತೆ ದಾನ-ಧರ್ಮ ಕೊಡುವುದು ಹಾಗೂ ಒಳ್ಳೆಯ ಕಾರ್ಯ ಮಾಡುವುದು ಮುಂತಾದ ಹೊರತೋರಿಕೆಯದ್ದಾಗಿದ್ದರಿಂದ, ಕ್ರಿಸ್ತನು ನಿಜವಾದ ಧಾರ್ಮಿಕ ವ್ಯಕ್ತಿಯಿಲ್ಲವೆಂಬುದು ಅವರ ಭಾವನೆಯಾಗಿತ್ತು. ದೀನಸ್ವಭಾವವು ಪರಿಶುದ್ಧ ಜೀವನದ ಅತ್ಯಂತ ಅಮೂಲ್ಯವಾದ ಪವಿತ್ರಾತ್ಮನ ಫಲವಾಗಿದೆ. ಇಂತಹ ಕೃಪೆಯು ನಮ್ಮಲ್ಲಿದ್ದಾಗ, ಅದರ ಪ್ರಭಾವದಿಂದ ನಮ್ಮ ಸ್ವಭಾವವು ರೂಪಿಸಲ್ಪಡುತ್ತದೆ. ಆಗ ನಾವು ಯಾವಾಗಲೂ ದೇವರಿಗಾಗಿ ಕಾತರದಿಂದ ಹಂಬಲಿಸುತ್ತೇವೆ ಹಾಗೂ ಆತನ ಚಿತ್ತಕ್ಕೆ ಒಪ್ಪಿಸಿಕೊಡುತ್ತೇವೆ. KanCCh 30.4
ನಿಸ್ವಾರ್ಥತೆ ತ್ಯಾಗ, ಔದಾರ್ಯ, ಕರುಣೆ, ದಯೆ, ತಾಳ್ಮೆ, ಕಷ್ಟ ಸಹಿಷ್ಣುತೆ ಮತ್ತು ಕ್ರೈಸ್ತೀಯ ಭರವಸೆಯು ದೇವರೊಂದಿಗೆ ನಿಜವಾಗಿಯೂ ಆತ್ಮೀಕ ಸಂಬಂಧ ಉಳ್ಳವರಲ್ಲಿ ಕಂಡುಬರುವ ದಿನನಿತ್ಯದ ಫಲಗಳಾಗಿವೆ. ಅವರ ಈ ಒಳ್ಳೆಯ ಸ್ವಭಾವವು ಲೋಕದಲ್ಲಿ ಕಂಡುಬರದಿರಬಹುದು. ಆದರೆ ಅವರು ಪ್ರತಿದಿನವೂ ದುಷ್ಟತ್ವದೊಂದಿಗೆ ಹೋರಾಡುತ್ತಾ, ಶೋಧನೆಗಳ ಮೇಲೆ ಅಮೂಲ್ಯವಾದ ಜಯಹೊಂದುವರು. ಮೌನವಾದ ಈ ಭಕ್ತರ ಹೋರಾಟವು ಇತರರಿಗೆ ಕಂಡುಬರುವುದಿಲ್ಲ. ಆದರೆ ಹೃದಯದ ಎಲ್ಲಾ ರಹಸ್ಯಗಳನ್ನು ಬಲ್ಲಾತನು ದೀನತೆಯಿಂದ ಮಾಡುವ ಎಲ್ಲಾ ಪ್ರಯತ್ನಗಳನ್ನು ಗಮನಿಸಿ ಗೌರವಿಸುವನು. ಕ್ರೈಸ್ತರ ಜೀವನದಲ್ಲಿ ಕಷ್ಟಸಂಕಟಗಳು ಬಂದಾಗಮಾತ್ರ. ಅವರ ಪ್ರೀತಿ ಹಾಗೂ ನಂಬಿಕೆಯು ಚೊಕ್ಕ ಬಂಗಾರದಂತೆ ಕಂಡುಬರುವವು. ಸಭೆಗೆ ಕಷ್ಟಸಂಕಟ, ಶೋಧನೆಗಳು ಬಂದಾಗಮಾತ್ರ, ಕ್ರಿಸ್ತನ ನಿಜವಾದ ಹಿಂಬಾಲಕರ ಪ್ರೀತಿ ಹಾಗೂ ಉತ್ಸಾಹವು ಹೆಚ್ಚಾಗುವುದು. KanCCh 31.1
ಯಥಾರ್ಥವಾಗಿ ಕ್ರಿಸ್ತಭಕ್ತನಾದವನ ಸಂಪರ್ಕಕ್ಕೆ ಬರುವವರೆಲ್ಲರೂ ಅವನ ಕ್ರೈಸ್ತ ಜೀವಿತದ ಸೌಂದರ್ಯ ಮತ್ತು ಸುವಾಸನೆಯನ್ನು ಗ್ರಹಿಸಿಕೊಳ್ಳುವರು. ಆದರೆ ನಿಜಕ್ರೈಸ್ತಭಕ್ತನಿಗೆ ಇದು ತಿಳಿದಿರುವುದಿಲ್ಲ. ಅವನು ದೈವೀಕ ಬೆಳಕಿಗಾಗಿ ಬೇಡಿಕೊಂಡು, ಅದರಲ್ಲಿ ನಡೆಯಲು ಇಷ್ಟಪಡುತ್ತಾನೆ. ತನ್ನ ತಂದೆಯಾದ ದೇವರ ಚಿತ್ತವನ್ನು ನೆರವೇರಿಸುವುದೇ ಅವನ ಆಹಾರವಾಗಿದೆ. ನಿಜಕ್ರೈಸ್ತ ಭಕ್ತನ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಮಾಡಲ್ಪಟ್ಟಿದೆ. ಆದಾಗ್ಯೂ ಅದರಬಗ್ಗೆ ಅವನಿಗೆ ತಿಳಿದಿರುವಂತೆ ಕಂಡುಬರುವುದಿಲ್ಲ ಅಥವಾ ಅವನು ಅದರಬಗ್ಗೆ ಹೆಚ್ಚಳ ಪಡುವುದೂ ಇಲ್ಲ. ಕ್ರಿಸ್ತನ ಹೆಜ್ಜೆಯ ಜಾಡಿನಲ್ಲಿ ನಡೆಯುವ ದೀನಸ್ವಭಾವದವರ ಮೇಲೆ ದೇವರ ಕರುಣೆಯಿರುತ್ತದೆ. ತಮ್ಮ ಒಳ್ಳೆಯ ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುವವರು ಇಂತಹ ಕ್ರೈಸ್ತಭಕ್ತರನ್ನು ಕೆಲಸಕ್ಕೆ ಬಾರದವರೆಂದು ನಿರ್ಲಕ್ಷಿಸಬಹುದು. ಆದರೆ ಪರಲೋಕದ ದೇವದೂತರು ಅವರ ಬಗ್ಗೆ ಬಹಳ ಪ್ರೀತಿ ಹೊಂದಿರುತ್ತಾರೆ ಹಾಗೂ ಅವರ ಸುತ್ತಲೂ ಬೆಂಕಿಯ ಕೋಟೆಯಂತಿದ್ದು ಅವರನ್ನು ಕಾಪಾಡುವರು. KanCCh 31.2