ಕೊನೆಯ ಕಾಲದ ಘಟನೆಗಳು

10/324

ಅಧ್ಯಾಯ-2
ಕ್ರಿಸ್ತನ ಶೀಘ್ರ ಬರೋಣದ ಸೂಚನೆಗಳು

ನಮ್ಮ ಕರ್ತನಾದ ಕ್ರಿಸ್ತನು ಹೇಳಿದ ಮಹಾಪ್ರವಾದನೆ

ಕ್ರಿಸ್ತನು ತನ್ನ ಶಿಷ್ಯರಿಗೆ ಯೆರೂಸಲೇಮ್ ಪಟ್ಟಣದ ನಾಶ ಹಾಗೂ ಮನುಷ್ಯಕುಮಾರನಾದ ತಾನು ಬರುವುದಕ್ಕೆ ಮೊದಲು ಸಂಭವಿಸುವ ಸೂಚಕಕಾರ್ಯಗಳ ಬಗ್ಗೆ ಮುಂದಾಗಿ ಎಚ್ಚರಿಕೆ ನೀಡಿದ್ದಾನೆ. ಮತ್ತಾಯ 24ನೇ ಅಧ್ಯಾಯವು ಕ್ರಿಸ್ತನ ಬರೋಣದ ಮೊದಲು ನಡೆಯಲಿರುವ ಘಟನೆಗಳನ್ನು ತಿಳಿಸುವ ಪ್ರವಾದನೆಯಾಗಿದೆ ಹಾಗೂ ಯೆರೂಸಲೇಮಿನ ನಾಶವು, ಈ ಲೋಕವು ಕೊನೆಯದಾಗಿ ಬೆಂಕಿಯಿಂದ ನಾಶವಾಗುವುದನ್ನು ಮಾದರಿಯಾಗಿ ತೋರಿಸಲು ಉಪಯೋಗಿಸಲಾಗಿದೆ (1899). ಕೊಕಾಘ 10.1

ಎಣ್ಣೆಮರಗಳ ಗುಡ್ಡದಲ್ಲಿ ಯೇಸುಸ್ವಾಮಿಯು ತನ್ನ ಎರಡನೇ ಬರೋಣಕ್ಕೆ ಮೊದಲು ಸಂಭವಿಸುವ ಭಯಾನಕವಾದ ನ್ಯಾಯತೀರ್ಪನ್ನು ಮುಂದಾಗಿ ತಿಳಿಸಿದನು: ‘ಇದಲ್ಲದೆ ಯುದ್ಧಗಳಾಗುವುದನ್ನು, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನು ನೀವು ಕೇಳಬೇಕಾಗಿರುವುದು... ಜನಕ್ಕೆ ವಿರುದ್ಧವಾಗಿ ಜನವೂ, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವು ಏಳುವವು : ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು; ಇವೆಲ್ಲಾ ನೂತನ ಕಾಲವು ಹುಟ್ಟುವ ಪ್ರಸವವೇದನೆಯ ಪ್ರಾರಂಭ’ (ಮತ್ತಾಯ 24:6-8). ಈ ಪ್ರವಾದನೆಗಳು ಯೆರೂಸಲೇಮು ನಾಶವಾದಾಗ, ಭಾಗಶಃ ನೆರವೇರಿದವು, ಆದರೆ ಕೊನೆಯ ದಿನಗಳಲ್ಲಿ ಎಲ್ಲವೂ ಅಕ್ಷರಶಃ ಅನ್ವಯವಾಗುತ್ತವೆ (ಟೆಸ್ಟಿಮೊನೀಸ್ ಫಾರ್ ದಿ ಚರ್ಚ್, ಸಂಪುಟ 1, ಪುಟ 753 (1899). ಕೊಕಾಘ 10.2