ಪರ್ವತ ಪ್ರಸಂಗ
“ನೀವು ಮೊದಲು ದೇವರ ರಾಜ್ಯಕ್ಕಾಗಿ ತವಕಪಡಿರಿ.”
ಕ್ರಿಸ್ತನ ವಾಕ್ಯಗಳನ್ನು ಕೇಳುತ್ತಿದ್ದ ಜನರು, ಭೂಲೋಕದ ರಾಜ್ಯದ ವಿಷಯದಲ್ಲಿ ಏನಾದರೂ ಹೇಳುವನೆಂದು ತವಕದಿಂದ ಎದುರುನೋಡುತ್ತಿದ್ದರು. ಯೇಸುವು ಪರಲೋಕದ ಐಶ್ವರ್ಯವನ್ನು ಅವರಿಗೆ ತೆರೆಯುತ್ತಿರಲು, ಅಲ್ಲಿ ನೆರೆದಿದ್ದ ಅನೇಕರ ಮನಸ್ಸಿನಲ್ಲಿ ಉದ್ಭವಿಸಿದ ಅತ್ಯಂತ ಕಠಿಣ ಪ್ರಸಂಗವೇನಂದರೆ, ಈತನ ಸಂಪರ್ಕದಿಮ್ದ ಲೋಕದಲ್ಲಿ ತಮ್ಮ ನಿರೀಕ್ಷೆಯು ಹೇಗೆ ವೃದ್ಧಿಯಾಗುವುದು? ಲೋಕದವುಗಳನ್ನು ತಮ್ಮ ಮಹತ್ತಾದ ಆಶೆಯೆಂದೆಣಿಸಿದ ಅವರು, ಅವರೆ ಸುತ್ತಲಿದ್ದ ಎಲ್ಲಾ ಸೃಷ್ಟಿಗಳನ್ನೂ ಸಂರಕ್ಷಿಸುತ್ತಿರು ದೇವರೊಬ್ಬನಿದ್ದಾನೆಂದು ತಿಳಿಯದೆ ಜೀವಿಸುವ ಅಜ್ಞಾನಿಗಳಂತಿದ್ದಾರೆಂದು ಯೇಸುವು ಅವರಿಗೆ ತೋರಿಸಿದನು. MBK 100.3
ಯೇಸು ಹೇಳಿದ್ದೇನಂದರೆ, “ಇವೆಲ್ಲವುಗಳ ಮೇಲೆ ಇಹಲೋಕದ ಜನಗಳು ತವಕಪಡುತ್ತಾರೆ.” “ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದಯಷ್ಟೆ. ಹೀಗಿರುವುದರಿಂದ ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವುವು.” ಲೂಕ 12: 3೦; ಮತ್ತಾಯ 6: 33. ನಾನು ಪ್ರೀತಿಯ, ನೀತಿಯ ಮತ್ತು ಸಮಾಧಾನದ ರಾಜ್ಯವನ್ನು ನಿಮಗೆ ಪ್ರಕಟಿಸಲಿಕ್ಕೆ ಬಂದಿದ್ದೇನೆ. ಈ ರಾಜ್ಯವನ್ನು ನೀವು ಅಂಗೀಕರಿಸಿಕೊಳ್ಳಲು ನಿಮ್ಮ ಹೃದಯಗಳನ್ನು ತೆರೆದು ಅದರ ಸೇವೆಯನ್ನು ನಿಮ್ಮ ಸರ್ವೋತ್ತಮ ಹಿತವೆಂದು ತಿಳಿಯಿರಿ. ಇದು ಪಾರಮಾರ್ಥಿಕ ರಾಜ್ಯವಾದರು ನಿಮ್ಮ ಜೀವನಸಂರಕ್ಷಣೆಯಿಲ್ಲವಾಗುವುದೆಂದು ಭಯಪಡದಿರ್ರಿ. ನೀವು ನಿಮ್ಮನ್ನೆ ದೇವರ ಸೇವೆಗೆ ಒಪ್ಪಿಸಿದರೆ, ಇಹಪರಗಳೆರಡರಲ್ಲೂ ಎಲ್ಲಾ ಶಕ್ತಿಯನ್ನೂ ಹೊಂದಿರುವಾತನು ನಿಮ್ಮ ಸಂರಕ್ಷಣೆಗೆ ಅವಶ್ಯವಾದುವನ್ನು ಒದಗಿಸುವನು. MBK 101.1
ಇದರಿಂದ ನಾವು ಕೆಲಸ ಮಾಡಲವಶ್ಯವಿಲ್ಲವೆಂದು ಯೇಸು ಹೇಳುವುದಿಲ್ಲ, ಆದರೆ ಪ್ರತಿಯೊಂದು ಕಾರ್ಯದಲ್ಲಿಯೂ ಆತನನ್ನೇ ಆದಿಯೂ ಅಂತ್ಯವೂ ಮತ್ತು ಸರ್ವೋತ್ತಮನೆಂದೆಣಿಸಬೇಕು. ನಮ್ಮ ಜೀವ್ಯದಲ್ಲೂ ಮತ್ತು ಗುಣಗಳಲ್ಲೂ ಮೀರಿ ಕೆಲಸ ಮಾಡುತ್ತಿರುವ ಆತನ ನೀತಿಗೆ ಅಡಚಣೆಯನ್ನುಂಟುಮಾಡುವ ಯಾವ ವ್ಯವಹಾರದಲ್ಲೂ ತೊಡಗಬಾರದು, ಯಾವ ಉದ್ಯೋಗವನ್ನೂ ಹಿಂಬಾಲಿಸಬಾರದು ಮತ್ತು ಯಾವ ಭೋಗವನ್ನೂ ಆಶಿಸಬಾರದು. ನಾವು ಏನು ಮಾಡಿದರೂ ದೇವರಿಗೆಂದೇ, ಹೃತ್ಪೂರಕವಾಗಿ ಮಾಡಬೇಕು. MBK 101.2
ಯೇಸುವು ಲೋಕದಲ್ಲಿ ಜೀವಿಸುವಾಗ, ದೇವರ ಮಹಿಮೆಯನ್ನು ಮನುಷ್ಯರ ಮುಂದಿಟ್ಟು ಮತ್ತು ಎಲ್ಲವನ್ನೂ ತನ್ನ ತಂದೆಯ ಚಿತ್ತಕ್ಕೊಪ್ಪಿಸಿ ಜೀವ್ಯವನ್ನು ಘನಪಡಿಸಿದನು. ನಾವೂ ಆತನ ಮಾದರಿಯನ್ನು ಅನುಸರಿಸಿದರೆ ನಮಗೆ ಅವಶ್ಯಕವಾಗಿರುವುದೆಲ್ಲಾ ಕೊಡಲ್ಪಡುವುವೆಂದು ಭರವಸೆಯಿತ್ತಿದ್ದಾನೆ. ದಾರಿದ್ರ್ಯವೋ ಅಥವಾ ಸಿರಿಯೋ, ರೋಗವೋ ಅಥವಾ ಆರೋಗ್ಯವೋ, ಮೂಢತನವೋ ಅಥವಾ ಜ್ಞಾನವೋ,-ಇವೆಲ್ಲಕ್ಕೂ ದೇವರ ಕೃಪೆಯ ವಾಗ್ದಾನದಿಮ್ದ ಅವಶ್ಯವಾದುದು ಒದಗಿಸಲ್ಪಟ್ಟಿದೆ. MBK 101.3
ಆತನ ಕಡೆಗೆ ಸಹಾಯಕ್ಕಾಗಿ ತಿರುಗುವ ಎಷ್ತೇ ನಿರ್ಬಲವಾಗಿದ್ದರೂ ಸಹ ದೇವರ ನಿತ್ಯ ಕರಗಳು ಅದನ್ನು ಆವರಿಸುವುವು. ಪರ್ವತಗಳಲ್ಲಿನ ಅಮೂ ಲ್ಯವಸ್ತುಗಳು ನಶಿಸಿ ಹೋಗುವುವು; ಆದರೆ ದೇವರಿಗಾಗಿ ಜೀವಿಸುವ ಆತ್ಮವು ಆತನಲ್ಲಿ ಸುರಕ್ಷಿತವಾಗಿರುವುದು.” ಲೋಕವೂ ಅದರ ಆಶೆಯೂ ಗತಿಸಿಹೋಗುತ್ತದೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” 1 ಯೋಹಾನ 2: 17. ಭೂಮಿಯ ಮೇಲೆ ನಷ್ಟ ತಾಪತ್ರಯಗಳಲ್ಲೂ ಪರಾಮರಿಕೆಗೂ ಮತ್ತು ಜ್ಞಾನಕ್ಕೂ, ಉಪಶಮನಕ್ಕೂ ಮತ್ತು ನಿರೀಕ್ಷೆಗೂ ದೇವರ ಮೇಲೆ ಆತುಕೊಳ್ಳಲು ಅಭ್ಯಾಸಿಸಿದವನಿಗೆ ದೇವರ ಪಟ್ಟಣದ ಸ್ವರ್ಣ ಕದಗಳು ಅವನನ್ನು ಸ್ವಾಗತಿಸಲು ತೆರೆದುಕೊಳ್ಳುವುವು. ದೇವದೂತರ ಇನಿಯ ಗೀತೆಗಳು ಅವನನ್ನು ಅಲ್ಲಿ ಸ್ವಾಗತಿಸುವುವು, ಮತ್ತು ಜೀವವೃಕ್ಷಗಳು ಅವನಿಗಾಗಿ ತಮ್ಮ ಫಲಗಳನ್ನು ಬಿಡುವುವು. “ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದಾವು, ಗುಡ್ಡಗಳು ಕದಲಿಯಾವು; ಆದರೆ ತನ್ನ ಕೃಪೆಯು ನಿನ್ನನ್ನು ಬಿಟ್ಟು ಹೋಗದು, ಸಮಾಧಾನದ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ.” ಯೆಶಾಯ 54: 1೦. MBK 101.4
“ಆದುದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ.....ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.” MBK 102.1
ನೀವು ನಿಮ್ಮನ್ನು ದೇವರಿಗೆ ಆತನ ಸೇವೆ ಮಾಡಲು ಒಪ್ಪಿಸಿಕೊಟ್ಟಿದ್ದರೆ, ನಾಳಿನ ವಿಚಾರದಲ್ಲಿ ನೀವು ಚಿಂತಿಸುವ ಅವಶ್ಯವಿಲ್ಲ. ನೀವು ಯಾರ ಸೇವಕರಾಗಿದ್ದೀರೋ ಆತನು ಅಂತ್ಯವನ್ನು ಆದಿಯಲ್ಲೇ ಅರಿತಿದ್ದಾನೆ. ನಿಮ್ಮ ದೃಷ್ಟಿಗೆ ಅಗೋಚರವಾದ ನಾಳಿನ ಸಂಭವಗಳು, ಸರ್ವವ್ಯಾಪಿಯಾದ ಆತನ ಕಣ್ಣುಗಳಿಗೆ ಎಲ್ಲವೂ ಗೋಚರವಾಗಿವೆ. MBK 102.2
ನಮ್ಮ ಕರ್ತವ್ಯದ ಭಾರವನ್ನು ನಾವೇ ತೆಗೆದುಕೊಂಡು, ಅವುಗಳ ಸಾಧನೆಗಾಗಿ ನಮ್ಮ ಸ್ವಂತ ಜ್ಞಾನದ ಮೇಲೆ ಆತುಕೊಂಡರೆ, ದೇವರು ನಮಗೆ ಕೊಡದ ಹೊರೆಯನ್ನು ಹೊರಲು ಆತನ ಸಹಾಯವಿಲ್ಲದೆ ಪ್ರಯತ್ನಿಸುವವರಾಗಿದ್ದೇವೆ. ದೇವರಿಗೆ ಸೇರಿದ ಜವಾಬ್ದಾರಿಕೆಯನ್ನು ನಮ್ಮ ಮೇಲೆ ತೆಗೆದಕೊಂಡು, ಹೀಗೆ ವಾಸ್ತವವಾಗಿ ನಮ್ಮನ್ನು ಆತನ ಸ್ಥಾನದಲ್ಲಿರಿಸಿಕೊಳ್ಳುತ್ತೇವೆ. ನಮಗೆ ಚಿಂತೆ ಇರಬಹುದು, ಅಪಾಯವನ್ನೂ ನಷ್ಟವನ್ನೂ ನಿರೀಕ್ಷಿಸುತ್ತಿರಬಹುದು; ಅದು ಬರುವುದು ನಿಶ್ಚಯವೇ. ಆದರೆ ದೇವರು ನಮ್ಮನ್ನು ಪ್ರೀತಿಸುತ್ತಾನೆಂದೂ, ಮತ್ತು ನಮಗೆ ಒಳ್ಳೇದನ್ನೇ ಮಾಡುತ್ತಾನೆಂದೂ ಯಥಾರ್ಥವಾಗಿ ನಂಬೆದರೆ, ಭವಿಷ್ಯದ ವಿಚಾರದಲ್ಲಿ ನಾವು ಚಿಂತಿಸುವುದನ್ನು ತ್ಯಜಿಸುವೆವು. ಮಗುವು ತನ್ನ ಪ್ರಿಯ ತಂದೆತಾಯಿಗಳಲ್ಲಿ ಭರವಸೆಯಿಡುವಂತೆ, ನಾವು ದೇವರಲ್ಲಿ ಭರವಸೆಯಿಡುವೆವು. ಆಗ ನಮ್ಮ ಕ್ಲೇಶಗಳೂ ಉಪದ್ರವಗಳೂ ಮಾಯವಾಗುವವು; ಯಾಕಂದರೆ ನಮ್ಮ ಚಿತ್ತವು ದೇವರ ಚಿತ್ತದಲ್ಲಿ ಪೂರೈಸಿತು. MBK 102.3
ನಾಳಿನ ಹೊರೆಯನ್ನು ಇಂದೇ ಹೊರಲು ಸಹಾಯ ಮಾಡುತ್ತೇನೆಂದು ಕ್ರಿಸ್ತನು ನಮಗೆ ವಾಗ್ದಾನ ಮಾಡಿಲ್ಲ. “ನನ್ನ ಕೃಪೆ ನಿನಗೆ ಸಾಕಾಗಿದೆ.” (2 ಕೊರಿಂಥ 12: 9), ಎಂದು ಹೇಳಿದ್ದಾನೆ; ಅದರೆ ಅರಣ್ಯದಲ್ಲಿ ಮನ್ನವು ಕೊಡಲ್ಪಟ್ಟಂತೆ, ನಮ್ಮ ಅಂದಿನ ಅವಶ್ಯಕತೆಗಾಗಿ ಪ್ರತಿನಿತ್ಯವೂ ಅನುಗ್ರಹಿಸಲ್ಪಡುವುದು. ಇಸ್ರಾಯೇಲರ ಯಾತ್ರೆಯ ಕಾಲದಲ್ಲಿದ್ದಂತೆ, ಪ್ರಾತಃಕಾಲ ಪ್ರಾತಃಕಾಲವೂ ಅಂದಿನ ಅವಶ್ಯಕತೆಯು ನಮಗೆ ಒದಗುವುದು. MBK 103.1
ಒಂದು ದಿನವು ಮಾತ್ರ ನಮ್ಮದು, ಈ ಒಂದು ದಿನದಲ್ಲಿ ನಾವು ದೇವರಿಗಾಗಿ ಜೀವಿಸಬೇಕು. ಈ ಒಂದು ದಿನದ ಮಟ್ಟಿಗೆ, ಅತಿ ಗಂಭೀರ ಸೇವೆಯಲ್ಲಿ, ನಮ್ಮ ಎಲ್ಲಾ ಉದ್ದೇಶ ಯೋಜನೆಗಳನ್ನೂ, ತಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಬೇಕು, ಯಾಕಂದರೆ ಆತನು ನಮ್ಮನ್ನು ಸಂರಕ್ಷಿಸುವವನಾಗಿದ್ದಾನೆ. “ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ, ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲು, ಹಿತದ ಯೋಚನೆಗಳೇ.” “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ.” ಯೆರೆಮೀಯ 29: 11; ಯೆಶಾಯ 3೦: 15. MBK 103.2
ನೀವು ನಿತ್ಯವೂ ದೇವರನ್ನು ಹಾರೈಸುತ್ತಾ ಮಾನಸಾಂತರ ಪಟ್ಟರೆ, ನಿಮ್ಮ ಆತ್ಮೀಯ ಆಯ್ಕೆಯಿಂದ ನೀವು ದೇವರಲ್ಲಿ ಸ್ವತಂತ್ರರಾಗಿಯೂ ಮತ್ತು ಉಲ್ಲಾಸವಾಗಿಯೂ ಇದ್ದರೆ, ಹೃದಯದ ಸಂತೋಷಜನಕ ಸಮ್ಮತಿಯಿಂದ ಆತನ ಕೃಪಾಪೂರ್ಣ ಆಮಂತ್ರಣಕ್ಕೊಪ್ಪಿ ಕ್ರಿಸ್ತನ ನೊಗವನ್ನು ಹೊತ್ತು ಬಂದರೆ,-ವಿಧೇಯತೆಯ ಮತ್ತು ಸೇವೆಯ ನೊಗವನ್ನು ಹೊತ್ತುಕೊಂಡು ಬಂದರೆ,-ನಿಮ್ಮ ಗೊಣಗಾಟವೆಲ್ಲಾ ಪ್ರಶಾಂತವಾಗುವುದು, ನಿಮ್ಮ ಸಂಕಷ್ಟಗಳೆಲ್ಲಾ ಪರಿಹಾರವಾಗುವವು, ಈಗ ನಿಮ್ಮನ್ನು ಎದುರಿಸಿ ದಿಗ್ಭ್ರಮೆ ಹಿಡಿಸಿರುವ ಸಮಸ್ಯೆಗಳೆಲ್ಲಾ ನಿರಾಯಾಸವಾಗಿ ಬಗೆ ಹರಿಯುವುವು. MBK 103.3